ಕಾಸರಗೋಡು, ಜು 29(DaijiworldNews/SM): ಕೊರಗ ಸಮುದಾಯದಿಂದ ಉನ್ನತ ಶಿಕ್ಷಣದೊಂದಿಗೆ ಎಂಫಿಲ್ ಪದವಿ ಪಡೆದ ಸಮುದಾಯದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳೀಕೆಯನ್ನು ಪಡೆದಿದ್ದ ಮಂಜೇಶ್ವರ ಜಿಲ್ಲೆಯ ವರ್ಕಾಡಿ ಸಮೀಪದ ಮೀನಾಕ್ಷಿ ಬೊಡ್ಡೋಡಿಯವರಿಗೆ ಸರ್ಕಾರದಿಂದ ಕೊನೆಗೂ ತಾತ್ಕಾಲಿಕ ಉದ್ಯೋಗ ಲಭಿಸಿದೆ.
ಕುಟುಂಬಶ್ರೀ ಜಿಲ್ಲಾ ಮಿಷನ್ ನಡಿ ಜಾರಿಗೊಳಿಸುವ ಕೊರಗ ಸ್ಪೆಷಲ್ ಯೋಜನೆಯ ಎನಿಮೇಟರ್ ಆಗಿ ಮೀನಾಕ್ಷಿಯವರನ್ನು ನೇಮಕ ಮಾಡಲಾಗಿದೆ. ಕೊರಗ ಸಮುದಾಯದ ಭಾಷೆ ಹಾಗೂ ಸಂಸ್ಕೃತಿ ವಿಷಯದಲ್ಲಿ ಎಂಫಿಲ್ ಪದವಿಯನ್ನೂ 2016ರ ಡಿಸೆಂಬರ್ ತಿಂಗಳಲ್ಲಿ ಪಡೆದಿದ್ದರು. ಇದರೊಂದಿಗೆ ಎಂಎ ಕನ್ನಡ ತೇರ್ಗಡೆ ಹೊಂದಿ 2014ರ ಗಣರಾಜ್ಯೋತ್ಸವಕ್ಕೆ ಈಕೆಯನ್ನು ವಿಶೇಷ ಅತಿಥಿಯಾಗಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಹ್ವಾನಿಸಿದ್ದರು.
ಇವರು ಸರ್ಕಾರಿ ಉದ್ಯೋಗ ಪಡೆಯುವ ಗುರಿಹೊಂದಿದ್ದರು, ಅದಕ್ಕಾಗಿ ಹಲವಾರು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಭೇಟಿಯಾಗಿದ್ದರು. ಆದರೆ ಉದ್ಯೋಗ ಲಭಿಸದ ಹಿನ್ನೆಲೆ ಮೀನಾಕ್ಷಿ ಜೀವನಕ್ಕೆ ಕಷ್ಟ ಸಾಧ್ಯವಾಗಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು.
ಇವರ ಕುರಿತಾಗಿ ದಾಯ್ಜಿವರ್ಲ್ಡ್ ನಲ್ಲಿ ವಿಸ್ತೃತ ವರದಿ ಪ್ರಕಟಮಾಡಿದ್ದೆವು. ಇದೀಗ ಕುಟುಂಬಶ್ರೀ ಜಿಲ್ಲಾ ಮಿಷನ್ ನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ ಸುರೇಂದ್ರನ್ ರವರಿಂದ ನೇಮಕಾತಿ ಪತ್ರವನ್ನು ಪಡೆದಿದ್ದಾರೆ. ಮುಂದೆ ಮೀ೦ಜ ಗ್ರಾಮ ಪಂಚಾಯತ್ ನಲ್ಲಿ ಮೀನಾಕ್ಷಿ ಸೇವೆ ಸಲ್ಲಿಸಲಿದ್ದಾರೆ.