ಬೆಂಗಳೂರು, ಜು 29(DaijiworldNews/SM): ಸಿ.ಆರ್.ಝಡ್. ವ್ಯಾಪ್ತಿಯ ಮರಳು ತೆರವುಗೊಳಿಸುವ ವಿಚಾರವಾಗಿ ಈ ಹಿಂದೆ ಆಗಸ್ಟ್ ತಿಂಗಳಿಂದ ಅನುಮತಿ ದೊರೆತಿದ್ದು ಇದೀಗ ಅದು ಮಾರ್ಪಾಡಾಗಿ ಸೆಪ್ಟೆಂಬರ್ 31ರಿಂದ ತೆರವುಗೊಳಿಸುವಂತೆ ಮುಂದೂಡಲಾಗಿತ್ತು. ಈ ಆದೇಶವನ್ನು ಮಾರ್ಪಾಡುಗೊಳಿಸುವಂತೆ ಆಗ್ರಹಿಸಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಮನವಿ ಸಲ್ಲಿಸಲಾಗಿದೆ.
ಅಂದರೆ 2 ತಿಂಗಳು ಮುಂದಕ್ಕೆ ಹಾಕಿ ಆದೇಶವನ್ನು ಮಾರ್ಪಾಡು ಮಾಡಲಾಗಿತ್ತು. ಈ ಬಗ್ಗೆ ಇಂದು ಖುದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿದ ಉಡುಪಿ ಶಾಸಕ ಕೆ ರಘುಪತಿ ಭಟ್ ಹಾಗೂ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಅವರು ಈ ಆದೇಶವನ್ನು ಮಾರ್ಪಾಡುಗೊಳಿಸಬೇಕು. ಹಾಗೂ ಜುಲೈ 31ರಿಂದಲೇ ಮರಳು ದಿಬ್ಬ ತೆರವುಗೊಳಿಸುವಂತೆ ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇನ್ನು ಕರಾವಳಿ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ತೀವ್ರಗೊಂಡಿದೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಮರಳು ಸಿಗದೆ ಅದೆಷ್ಟೋ ಕಾರ್ಮಿಕರು ಕಂಗಾಲಾಗಿದ್ದಾರೆ. ಕಳೆದ ಹಲವು ಸಮಯಗಳಿಂದ ನಿರುದ್ಯೋಗಿಗಳಾಗಿದ್ದಾರೆ. ಮರಳಿನ ಸಮಸ್ಯೆ ಬಗೆ ಹರಿಸುವಂತೆ ನಿರಂತರ ಒತ್ತಾಯಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಮರಳು ಸಮಸ್ಯೆ ಪರಿಹಾರಿಸುವ ನಿಟ್ಟಿನಲ್ಲಿ ಸಿಎಂ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಿದ ದಿನದಂದೇ ಮನವಿ ಸಲ್ಲಿಸಲಾಯಿತು.