ಮಂಗಳೂರು, ಜು 29(DaijiworldNews/SM): ಬೋಂದೇಲಿನಲ್ಲಿರುವ ಸಂತ ಲಾರೆನ್ಸರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವವು ಆಗಸ್ಟ್ 10ರಂದು ವಿಜೃಭನೆಯಿಂದ ಜರಗಲಿದೆ ಎಂದು ಕ್ಷೇತ್ರದ ಪ್ರಧಾನ ಧರ್ಮಗುರು ಫಾ. ಆ್ಯಂಡ್ರು ಲಿಯೋ ಡಿಸೋಜ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಷಿಕ ಮಹೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 1ರಿಂದ 9ರ ತನಕ ನೊವೆನಾ ಪ್ರಾರ್ಥನೆಗಳು ಜರಗಲಿವೆ ಎಂದರು. ಇನ್ನು ಹಬ್ಬದ ಪೂರ್ವಭಾವಿಯಾಗಿ ನಡೆಯುವ ನೊವೆನಾ ಪ್ರಾರ್ಥನೆ ಸಂದರ್ಭದಲ್ಲಿ ಮಧ್ಯಾಹ್ನದ ವೇಳೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 31 ರ ಸಂಜೆ 5:30ಕ್ಕೆ ಮೇರಿಹಿಲ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಮೈದಾನದಿಂದ ಹಸಿರು ಹೊರೆ ಕಾಣಿಕೆ ಮೆರವಣಿಗೆ ಜರಗಲಿದೆ ಎಂದರು.
ಹೊರೆ ಕಾಣಿಕೆ ಮೆರವಣಿಗೆಗೆ ಮಾಜಿ ಶಾಸಕ ಜೆ.ಆರ್. ಲೋಬೊ ಚಾಲನೆ ನೀಡಲಿದ್ದಾರೆ. ಮಾತ್ರವಲ್ಲದೆ ಆಗಸ್ಟ್ ೧ರಂದು ಮುಂಜಾನೆ 10 ಗಂಟೆಗೆ ಚರ್ಚ್ ಆವರಣದಲ್ಲಿ ನೊವೆನಾ ಪ್ರಾರ್ಥನೆಯ ಉದ್ಘಾಟನಾ ಕಾರ್ಯ ನಡೆಯಲಿದೆ. ದಾಯ್ಜಿವರ್ಲ್ಡ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ವಾಲ್ಟರ್ ನಂದಳಿಕೆ ಧ್ವಜರೋಹಣ ನೆರವೇರಿಸಲಿದ್ದಾರೆ ಎಂದರು.
ಇನ್ನು ವಾರ್ಷಿಕ ಮಹೋತ್ಸವದ ಪ್ರಯುಕ್ತ ಆಗಸ್ಟ್ 1ರಿಂದ 10ರ ವರೆಗೆ ಒಂಬತ್ತು ದಿನಗಳ ನಡೆಯುವ ನೊವೆನಾ ಪ್ರಾರ್ಥನೆಗಳಲ್ಲಿ ವಿಶೇಷ ಇರಾದೆಗಳಿಗೆ, ಕೋರಿಕೆಗಳಿಗಾಗಿ ಪ್ರಾರ್ಥಿಸಲಾಗುವುದು. ಹಾಗೂ ಇದೇ ಸಂದರ್ಭ ಬಲಿಪೂಜೆ ಕೂಡ ಜರಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚರ್ಚ್ ನ ಸಹಾಯಕ ಧರ್ಮಗುರುಗಳಾದ ಕ್ಲಿಫರ್ಡ್, ಫಾ. ಸಿರಿಲ್ ಲೋಬೊ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಹೆನ್ಬರ್ಟ್ ಪಿಂಟೊ, ಚರ್ಚ್ ಪಾಲನ ಮಂಡಳಿಯ ಕಾರ್ಯದರ್ಶಿ ಫ್ರಾನ್ಸಿಸ್ ವೇಗಸ್, ಪುಣ್ಯ ಕ್ಷೇತ್ರ ಪ್ರಚಾರ ಸಮಿತಿ ಮುಖ್ಯಸ್ಥ ಸ್ಟ್ಯಾನಿ ಆಲ್ವಾರಿಸ್ ಮತ್ತಿತರರು ಉಪಸ್ಥಿತರಿದ್ದರು.