ಮಂಗಳೂರು,ಜು 29 (Daijiworld News/MSP)::ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ,ಖ್ಯಾತ ಉದ್ಯಮಿ ಹಾಗೂ ಕಾಫೀ ಡೇ ಮಾಲೀಕ ಸಿದ್ದಾರ್ಥ್ ಅವರು ಸೋಮವಾರ ರಾತ್ರಿ, ಸುಮಾರು 7.30ರ ವೇಳೆಗೆ ಮಂಗಳೂರಿನ ನೇತ್ರಾವತಿ ನದಿ ಸೇತುವೆ ಬಳಿಯಿಂದ ಕಾರು ನಿಲ್ಲಿಸಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಸಿದ್ದಾರ್ಥ್ ಅವರುಖಾಸಗಿ ಕಂಪೆನಿಯ ಹೆಸರಿನಲ್ಲಿ ನೋಂದಣಿಯಾಗಿರುವ ಕೆಎ 03, ಎನ್ಸಿ-2592 ಸಂಖ್ಯೆ ಹೊಂದಿರುವ ಇನ್ನೋವಾ ಬೆಂಗಳೂರಿನಿಂದ,ಮಂಗಳೂರಿಗೆ ಇಬ್ಬರ ಜತೆ ಕಾರಿನಲ್ಲಿ ಅವರು ಬಂದಿದ್ದರು. ಪಂಪ್ವೆಲ್ ಬಳಿ ಕಾರು ತಲುಪಿದಾಗ ಜತೆಗಿದ್ದ ಇಬ್ಬರು ಕಾರಿನಿಂದ ಇಳಿದು ಹೋಗಿದ್ದರು. ಆ ಬಳಿಕ ಸಿದ್ದಾರ್ಥ್ ಸೂಚನೆಯಂತೆ ಚಾಲಕ ಕಾರನ್ನು ಉಳ್ಳಾಲ ಕಡೆ ತಿರುಗಿಸಿದ್ದನು. ಕಾರು ನೇತ್ರಾವತಿ ಸೇತುವೆ ಬಳಿ ಬರುತ್ತಿದ್ದಂತೆ ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.ಬಳಿಕ ಸಿದ್ದಾರ್ಥ್ ಕಾರಿನಿಂದ ಇಳಿದು ನೇತ್ರಾವತಿ ಸೇತುವೆ ಮೇಲೆ ಕಾಲ್ನಡಿಗೆಯಲ್ಲಿ ಸಾಗಿದ್ದಾರೆ. ಸೇತುವೆ ಮೇಲೆ ಒಂದು ಸುತ್ತು ಹಾಕಿ ವಾಪಾಸ್ ಕಾರಿನತ್ತ ಬಂದು ಮತ್ತೆ ತಾನು ವಾಕಿಂಗ್ ಮಾಡುತ್ತಿರುವುದಾಗಿ ಹೇಳಿ ಮುಂದಕ್ಕೆ ಸಾಗಿದ್ದಾರೆ. ಸ್ವಲ್ಪ ದೂರ ಸಾಗುತ್ತಿರುವುದನ್ನು ಕಾರಿನಲ್ಲಿ ಕುಳಿತ್ತಿದ್ದ ಚಾಲಕ ನೋಡಿದ್ದಾರೆ. ಅಷ್ಟು ಹೊತ್ತಿಗೆ ಜೋರು ಮಳೆ ಪ್ರಾರಂಭವಾಗಿದ್ದು, ಸಿದ್ದಾರ್ಥ್ ಅವರು ಮುಂದೆ ಎಲ್ಲಿಗೆ ಹೋಗಿದ್ದಾರೆ ಎಂದು ಚಾಲಕರಿಗೆ ಗೊತ್ತಾಗಿರಲಿಲ್ಲ.
ಮುಂದೆ ಸಿದ್ದಾರ್ಥ್ ವಾಪಾಸ್ ಬರದಿರುವುದನ್ನು ಗಮನಿಸಿ ಚಾಲಕ, ಹುಡುಕಲಾರಂಭಿಸಿದ್ದು, ಆ ಬಳಿಕ ಸಿದ್ದಾರ್ಥ್ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸಿದ್ದಾರ್ಥ್ ಎಲ್ಲಿಗೆ ಹೋಗಿದ್ದಾರೆ? ಅಥವಾ ಏನಾದರೂ ಅನಾಹುತ ಸಂಭವಿಸಿದೆಯೇ ಎನ್ನುವುದು ತಿಳಿದುಬಂದಿಲ್ಲ. ಇದೀಗ ಸಿದ್ದಾರ್ಥ್ ನಾಪತ್ತೆ ಪ್ರಕರಣ ಇಡೀ ರಾಜ್ಯದಲ್ಲಿ ಸಾಕಷ್ಟು ಕೂತೂಹಲ ಹಾಗೂ ದಿಗ್ಭ್ರಮೆಗೆ ಕಾರಣವಾಗಿದೆ.
ಮೂಲಗಳ ಪ್ರಕಾರ ಸಿದ್ದಾರ್ಥ್ ಅವರು ಕಪ್ಪು ಟಿ- ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ್ದರು ಎನ್ನಲಾಗಿದೆ. ನಾಪತ್ತೆಯಾಗಿರುವ ಸ್ಥಳಕ್ಕೆ ತಡರಾತ್ರಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ , ಹಿರಿಯ ಪೊಲೀಸ್ ಅಧಿಕಾರಿಗಳು ,ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿಯಾಗಿರುವ ಕಾರಣ ನೇತ್ರಾವತಿ ನದಿಯಲ್ಲಿ ಹುಡುಕಾಟ ನಡೆಸುವುದಕ್ಕೆ ಸಾಧ್ಯವಾಗಿಲ್ಲ.ಹೀಗಾಗಿ ಮಂಗಳವಾರ ಮುಂಜಾನೆಗೆ ಕಾರ್ಯಾಚರಣೆ ನಡೆಯಲಿದೆ.