ಮಂಗಳೂರು, ಜು30(Daijiworld News/SS): ಮಾಜಿ ಮುಖ್ಯಮಂತ್ರಿ, ಎಸ್. ಎಂ. ಕೃಷ್ಣ ಅವರ ಅಳಿಯ ವಿ.ಜಿ. ಸಿದ್ದಾರ್ಥ್ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
ವಿ.ಜಿ. ಸಿದ್ದಾರ್ಥ್ ಸೋಮವಾರ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು. ಈ ಹಿನ್ನಲೆಯಲ್ಲಿ ಜಪ್ಪಿನ ಮೊಗರು, ಅಳಿವೆ ಬಾಗಿಲು, ಉಳ್ಳಾಲ ಸುತ್ತಮುತ್ತ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. 30ಕ್ಕೂ ಹೆಚ್ಚು ಬೋಟ್'ಗಳಲ್ಲಿ 300ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಹುಡುಕಾಟ ನಡೆಯುತ್ತಿದೆ. ಸ್ಥಳಕ್ಕೆ ಎನ್ ಡಿ ಆರ್ ಎಫ್ ತಂಡ ಆಗಮಿಸುತ್ತಿದೆ.
ಕರಾವಳಿ ರಕ್ಷಣಾ ಪಡೆ ಮತ್ತು ನೌಕಪಡೆಯ ನೆರವಿನ ಜೊತೆಗೆ ಅಗ್ನಿಶಾಮಕ ದಳ, ತಣ್ಣೀರುಬಾವಿಯಿಂದ ಮುಳುಗು ತಜ್ಞರು ಆಗಮಿಸಿದ್ದು ನೇತ್ರಾವತಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಮುಳುಗು ತಜ್ಞರ ಶೋಧ ಕಾರ್ಯಕ್ಕೆ ಮಳೆ ಅಡ್ಡಿಯಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ, ಶಾಸಕ ಯು.ಟಿ ಖಾದರ್, ರಮಾನಾಥ ರೈ ಆಗಮಿಸಿದ್ದಾರೆ.
ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿರುವ ಚಾಲಕ ಬಸವಾರಾಜ ಪಾಟೀಲ್, ಸೋಮವಾರ ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದೆ. ಸದಾಶಿವನಗರದ ಮನೆಯಿಂದ ಕಚೇರಿಗೆ ಕರೆದೊಯ್ಯಲು ಹೇಳಿದರು. ಅದಂತೆ ಕಚೇರಿಗೆ ಕರೆದೊಯ್ದಿದ್ದೆ. ಮಧ್ಯಾಹ್ನ ಮನೆಗೆ ಮರಳಿದರು. ನಂತರ ಸಕಲೇಶಪುರಕ್ಕೆ ಹೋಗೋಣ ಎಂದರು. ಅದರಂತೆ ಸಕಲೇಶಪುರಕ್ಕೆ ಹೋದ ಬಳಿಕ, ಬೇಡ ಮಂಗಳೂರಿಗೆ ಹೋಗೋಣ ಎಂದರು. ಅದರಂತೆ ಮಂಗಳೂರಿಗೆ ಕರೆತಂದಿದ್ದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಮಂಗಳೂರಿಗೆ ಬಂದ ಬಳಿಕ ಸೈಟ್ ನೋಡಬೇಕು ಎಂದು ಹೇಳಿ ಮತ್ತೆ ನಾಲ್ಕು ಕಿ.ಮೀ. ವಾಪಸು ಕರೆದುಕೊಂಡು ಬಂದು ತೊಕ್ಕೊಟ್ಟು ಸೇತುವೆ ಬಳಿ ಇಳಿದರು. ಬಳಿಕ ನಾನು ಫೋನ್'ನಲ್ಲಿ ಮಾತನಾಡುತ್ತಾ ನಡೆದುಕೊಂಡು ಬರುತ್ತೇನೆ, ಇಲ್ಲೇ ಇರು ಎಂದರು. ಹಾಗೆ ಹೇಳಿ ಒಂದು ಗಂಟೆಯಾದರೂ ಹಿಂದಿರುಗಿ ಬರಲಿಲ್ಲ. ಮೊಬೈಲ್ಫೋನ್ಗೆ ಕರೆ ಮಾಡಿದಾಗ ಅದು ಸ್ವಿಚ್ಆಫ್ ಆಗಿತ್ತು. ತಕ್ಷಣವೇ ಅವರ ಪುತ್ರನಿಗೆ ಕರೆ ಮಾಡಿದೆ. ಅವರು ಕೂಡ ಕರೆ ಮಾಡಿ ನೋಡುವುದಾಗಿ ಹೇಳಿದರು. ನಂತರ ಕಂಪನಿಯ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ತಿಳಿಸಿದ್ದಾರೆ.