ಬೆಳ್ತಂಗಡಿ, ಫೆ. 20 (DaijiworldNews/AA): ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಧರ್ಮಸ್ಥಳದ ನಾಟಿ ವೈದ್ಯ ಹಾಗೂ ಕಾಂಗ್ರೆಸ್ ಮುಖಂಡ ಕರಿಯಪ್ಪ ಗೌಡ(72) ಅವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.

ಫೆಬ್ರವರಿ 17ರ ಸಂಜೆ ಕರಿಯಪ್ಪ ಗೌಡ ಅವರು ಉಜಿರೆಯಿಂದ ಧರ್ಮಸ್ಥಳದ ಕಡೆಗೆ ತಮ್ಮ ಬೈಕ್ನಲ್ಲಿ ತೆರಳುತ್ತಿದ್ದರು. ಪಾಂಗಳ ತಿರುವಿನಲ್ಲಿ ಅವರು ತಮ್ಮ ಬೈಕನ್ನು ಬಲಕ್ಕೆ ತಿರುಗಿಸುತ್ತಿದ್ದಾಗ, ಅತಿವೇಗವಾಗಿ ಬಂದ ಬಸ್ಸೊಂದು ಬೈಕ್ಗೆ ಢಿಕ್ಕಿ ಹೊಡೆದಿದೆ. ಈ ಢಿಕ್ಕಿಯ ರಭಸಕ್ಕೆ ಬೈಕನ್ನು ರಸ್ತೆಯ ತೀರಾ ಬಲಕ್ಕೆ ಎಳೆದುಕೊಂಡು ಹೋದ ಬಸ್, ನಂತರ ಉಜಿರೆ ಕಡೆಗೆ ಬರುತ್ತಿದ್ದ ಕಾರಿಗೂ ಢಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕರಿಯಪ್ಪ ಗೌಡ ಅವರಿಗೆ ಮೊದಲು ಉಜಿರೆಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಗುರುವಾರ ಕೊನೆಯುಸಿರೆಳೆದರು.
ಮೃತ ಕರಿಯಪ್ಪ ಗೌಡ ಅವರು ಈ ಭಾಗದಲ್ಲಿ ಚಿರಪರಿಚಿತ ವ್ಯಕ್ತಿಯಾಗಿದ್ದರು. ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಜೊತೆಗೆ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದರು. ಸ್ಥಳೀಯವಾಗಿ ಅತ್ಯಂತ ಜನಪ್ರಿಯ ನಾಟಿ ವೈದ್ಯರಾಗಿ ಕೂಡ ಗುರುತಿಸಿಕೊಂಡಿದ್ದರು.