ಕುಂದಾಪುರ, ಫೆ. 20 (DaijiworldNews/TA): ಲಾರಿಯೊಂದು ಆಕಸ್ಮಿಕ ಬೆಂಕಿಯಿಂದಾಗಿ ಸೇತುವೆ ಮೇಲೆ ಹೊತ್ತಿ ಉರಿದ ಘಟನೆ ಫೆ.19ರ ಮಧ್ಯರಾತ್ರಿ ಸುಮಾರಿಗೆ ಬೈಂದೂರಿನ ಉಪ್ಪುಂದ-ಬಿಜೂರು ರಾಷ್ಟ್ರೀಯ ಹೆದ್ದಾರಿ-66 ಸೇತುವೆಯಲ್ಲಿ ಸಂಭವಿಸಿದೆ.



ಧಾರವಾಡದಿಂದ ಕುಂದಾಪುರಕ್ಕೆ ಪಶು ಆಹಾರವನ್ನು ಸಾಗಿಸುತ್ತಿದ್ದ ಲಾರಿ ಇದಾಗಿದ್ದು ರಾತ್ರಿ 1 ಗಂಟೆ ಸುಮಾರಿಗೆ ಯಡ್ತರೆ ಬೈಪಾಸ್ನಿಂದ ಮುಂದಕ್ಕೆ ಸಾಗಿ ಬಿಜೂರು ಬಳಿ ಆಗಮಿಸುವಾಗ ಹಿಂಬದಿಯ ಟಯರ್ ಸ್ಫೋಟಗೊಂಡು ಲಾರಿಗೆ ಬೆಂಕಿ ತಗುಲಿದೆ. ಭಾಗಶಃ ಲಾರಿ ಸಹಿತ ಒಳಗಿದ್ದ ಪಶು ಆಹಾರಗಳು ಅಗ್ನಿಗಾಹುತಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಲಾರಿ ಚಾಲಕ ಚಂದ್ರಕಾಂತ್ ಎನ್ನುವರು ಅಪಾಯದಿಂದ ಪಾರಾಗಿದ್ದಾರೆ. ಸೇತುವೆ ಮೇಲೆ ಲಾರಿಗೆ ಬೆಂಕಿ ಹಿಡಿದು ಹೊತ್ತಿ ಉರಿದ ಕಾರಣ ಒಂದಷ್ಟು ಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಯಡ್ತರೆ ಜಂಕ್ಷನ್ ಬಳಿ ತಿರುವು ನೀಡಿ ವಾಹನಗಳು ಹೆದ್ದಾರಿಯ ಇನ್ನೊಂದು ರಸ್ತೆ ಮೂಲಕ ಸಾಗಲು ಅನುವು ಮಾಡಿಕೊಟ್ಟರು.