ಉಡುಪಿ : ದೀರ್ಘಕಾಲ ನಿರ್ಲಕ್ಷ್ಯಗೊಂಡಿದ್ದ ಕಲ್ಸಂಕ-ಅಂಬಾಗಿಲು ರಸ್ತೆ ಕಾಂಕ್ರೀಟೀಕರಣ - ದೈಜಿವರ್ಲ್ಡ್ ವರದಿ ಫಲಶ್ರುತಿ
Fri, Feb 20 2026 06:43:14 PM
ಉಡುಪಿ, ಫೆ. 20 (DaijiworldNews/TA): ಕಲ್ಸಂಕ-ಅಂಬಾಗಿಲು ರಸ್ತೆಯ ಸಿಲಾಸ್ ಶಾಲೆಯ ಸಮೀಪದ ದೀರ್ಘಕಾಲ ನಿರ್ಲಕ್ಷ್ಯಗೊಂಡಿದ್ದ ರಸ್ತೆ ಭಾಗವು ಇದೀಗ ಸಂಪೂರ್ಣವಾಗಿ ಕಾಂಕ್ರೀಟೀಕರಣಗೊಂಡಿದ್ದು, ಪ್ರತಿದಿನ ಸಂಚರಿಸುವ ನೂರಾರು ವಾಹನ ಸವಾರರಿಗೆ ನೆಮ್ಮದಿಯಿಂದ ಸಂಚರಿಸುವ ಭಾಗ್ಯ ಸಿಕ್ಕಿದೆ. ಈ ಬಗ್ಗೆ ದೈಜಿವರ್ಲ್ಡ್ ನಿರಂತರ ವರದಿ ಭಿತ್ತರಿಸಿತ್ತು. ಈ ವರದಿಯ ಫಲಶ್ರುತಿ ಇದಾಗಿದೆ.
ಕಲ್ಸಂಕ-ಅಂಬಾಗಿಲು ರಸ್ತೆಯ ಸಿಲಾಸ್ ಶಾಲೆಯ ಸಮೀಪ 2025ರ ಜುಲೈ ತಿಂಗಳಲ್ಲಿ ಮ್ಯಾನ್ಹೋಲ್ನಿಂದ ಒಳಚರಂಡಿ ನೀರು ರಸ್ತೆಯ ಮೇಲೆ ಹರಿದುಬಂದ ಪರಿಣಾಮ ರಸ್ತೆ ಭಾಗ ಜಾರುವಂತ ಸ್ಥಿತಿಗೆ ತಲುಪಿತ್ತು. ನಿರಂತರವಾಗಿ ಹರಿದ ಕೊಳಚೆ ನೀರಿನಿಂದ ರಸ್ತೆ ಸಂಪೂರ್ಣ ಹಾಳಾಗಿ ಆಳವಾದ ಗುಂಡಿಗಳು ಉಂಟಾಗಿದ್ದವು. ಈ ಅಪಾಯಕರ ಪರಿಸ್ಥಿತಿಯನ್ನು ನಮ್ಮ ದಾಯ್ಜಿವರ್ಲ್ಡ್ ವಾಹಿನಿ ತನ್ನ ನಿರಂತರ ವರದಿಗಳ ಮೂಲಕ ಬೆಳಕಿಗೆ ತಂದಿದ್ದು, ವಾಹನ ಸವಾರರು, ಪಾದಚಾರಿಗಳು ಹಾಗೂ ಪ್ರತಿದಿನ ಈ ಮಾರ್ಗವನ್ನು ಬಳಸುವ ಶಾಲಾ ಮಕ್ಕಳಿಗೆ ಎದುರಾಗುತ್ತಿದ್ದ ಅಪಾಯಗಳನ್ನು ಗಮನಕ್ಕೆ ತಂದಿತ್ತು. ಮೊದಲ ವರದಿಯ ನಂತರ ಅಧಿಕಾರಿಗಳು ತಾತ್ಕಾಲಿಕ ಕ್ರಮವಾಗಿ ಹಾನಿಗೊಳಗಾದ ಭಾಗದ ಸುತ್ತ ಬ್ಯಾರಿಕೇಡ್ಗಳನ್ನು ಇಟ್ಟು, ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕೆಲಸ ಮಾಡಲಾಯಿತು.
ಈ ತಾತ್ಕಾಲಿಕ ದುರಸ್ತಿ ಸಮಸ್ಯೆಯನ್ನು ಪರಿಹರಿಸಲು ಇಲಾಖೆಯಲ್ಲಾಗದೇ ವಾಹನ ಸವಾರರಿಗೆ ಮತ್ತಷ್ಟು ತೊಂದರೆ ಅನುಭವಿಸಬೇಕಾಯಿತು. 2025ರ ಅಕ್ಟೋಬರ್ನಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು . ಸಿಲಾಸ್ ಶಾಲೆಯ ಸಮೀಪದ ಹಾನಿಗೊಂಡ ಮ್ಯಾನ್ಹೋಲ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು. ಮ್ಯಾನ್ಹೋಲ್ ಒಡೆದು ಮತ್ತಷ್ಟು ಅಪಘಾತಕ್ಕೆ ಕಾರಣವಾಗಿ ಪರಿಸರ ಕೂಡ ದೂಳುಮಯ ಪರಿಸ್ಥಿತಿ ನಿರ್ಮಾಣವಾಗಿ ಅನೇಕ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೊಳಪಟ್ಟರು. 2025ರ ಡಿಸೆಂಬರ್ನಲ್ಲಿ ದೊಡ್ಡ ಗುಂಡಿಗಳು ಮರುಕಳಿಸಿದ್ದ ಹಿನ್ನೆಲೆಯಲ್ಲಿ ಮತ್ತೊಂದು ಸಮಗ್ರ ಸುದ್ದಿಯನ್ನು ನಮ್ಮ ವಾಹಿನಿಯು ಪ್ರಕಟಿಸಿದ್ದು ವರದಿ ಬಳಿಕ ಸಂಬಂಧಪಟ್ಟ ಇಲಾಖೆಯು ದುರಸ್ತಿ ಕಾರ್ಯ ಕೈಗೊಂಡರು. ಹಾನಿಗೊಂಡ ಮ್ಯಾನ್ಹೋಲ್ ರಚನೆಯನ್ನು ಸಂಪೂರ್ಣವಾಗಿ ಮರುನಿರ್ಮಿಸಿ, ಸಂಬಂಧಿತ ರಸ್ತೆ ಭಾಗವನ್ನು ಸಂಪೂರ್ಣ ಕಾಂಕ್ರೀಟೀಕರಣಗೊಳಿಸಿದರು.
ಹೊಸದಾಗಿ ಕಾಂಕ್ರೀಟೀಕರಣಗೊಂಡ ರಸ್ತೆ ಭಾಗವು ಇದೀಗ ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳಿಗೆ ಸುರಕ್ಷಿತ ಮತ್ತು ದೀರ್ಘಕಾಲ ವಾಹನ ಸವಾರರು ಸಂಚಾರ ಮಾಡುವ ಸೌಲಭ್ಯ ಸಿಕ್ಕಿರುವುದು ವಾಹನ ಸವಾರರಿಗೆ ನೀರು ನಿಂತುಕೊಳ್ಳುವ ಸಮಸ್ಯೆಯಾಗಲಿ, ಆಳವಾದ ಗುಂಡಿಗಳಾಗಲಿ ಇದ್ಯಾವುದರ ಸಮಸ್ಯೆ ಮತ್ತೆ ಎದುರಾಗದಂತಾಗಿದೆ.