ಕಾಪು, ಫೆ. 21 (DaijiworldNews/AA): ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿರ್ವ ಮುಖ್ಯರಸ್ತೆ ಸೇತುವೆಯ ಸಮೀಪವಿರುವ ಜಲಮೂಲವು ತೀವ್ರವಾಗಿ ಕಲುಷಿತಗೊಂಡಿರುವ ಪರಿಣಾಮ ದುರ್ವಾಸನೆ ಬರುತ್ತಿದ್ದು, ನಿಂತ ನೀರು ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.




ಕೃಷಿ ಉದ್ದೇಶಗಳಿಗಾಗಿ ಬೇಸಿಗೆಯಲ್ಲಿ ನೀರು ಸಂಗ್ರಹಿಸಲು ಇಲ್ಲಿ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಆದರೆ, ಕಳೆದ ಮೂರು ತಿಂಗಳ ಹಿಂದೆ ಬೃಹತ್ ಮರವೊಂದು ಉರುಳಿ ಹಳ್ಳಕ್ಕೆ ಬಿದ್ದಿದ್ದರಿಂದ ನೀರಿನ ನೈಸರ್ಗಿಕ ಹರಿವು ಸಂಪೂರ್ಣವಾಗಿ ನಿಂತಿದೆ. ಪರಿಣಾಮ ಹೂಳು, ಒಣಗಿದ ಹುಲ್ಲು ಮತ್ತು ಹತ್ತಿರದ ಕ್ಯಾಟರಿಂಗ್ ಸರ್ವಿಸ್ನಿಂದ ಎಸೆಯಲ್ಪಟ್ಟ ಆಹಾರದ ತ್ಯಾಜ್ಯಗಳು ಸೇರಿ ನೀರು ಕಲುಷಿತಗೊಂಡಿದೆ.
ಪ್ರಸ್ತುತ ಈ ನಿಂತ ನೀರು ತುಂಬಾ ದುರ್ವಾಸನೆಯನ್ನು ಬೀರುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳಿಗೆ ಉಸಿರಾಡಲು ಕಷ್ಟಪಡುವಂತಾಗಿದೆ. ಇನ್ನು ಈ ಸ್ಥಳವು ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರವಾಗಿ ಬದಲಾಗುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಅಲ್ಲದೆ, ಈ ಕಲುಷಿತ ನೀರು ಅಂತರ್ಜಲಕ್ಕೆ ಸೇರಿ ಕುಡಿಯುವ ನೀರಿನ ಮೂಲಗಳೂ ವಿಷಕಾರಿಯಾಗುವ ಸಾಧ್ಯತೆಯಿದೆ.
"ಮರ ಬಿದ್ದು ಮೂರು ತಿಂಗಳಾದರೂ ಅದನ್ನು ತೆರವುಗೊಳಿಸಿಲ್ಲ, ಇದರಿಂದ ನದಿಯ ಹರಿವು ನಿಂತಿದೆ. ಎರಡು ವಾರಗಳ ಹಿಂದೆಯೇ ಗ್ರಾಮ ಪಂಚಾಯತ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸುತ್ತಮುತ್ತಲಿನ ಗಾಳಿ ಸಂಪೂರ್ಣ ಮಲಿನವಾಗಿದ್ದು, ಉಸಿರಾಡುವುದು ಕಷ್ಟವಾಗಿದೆ. ನೀರು ಕಪ್ಪಾಗಿ ಮಾರ್ಪಟ್ಟು ದುರ್ವಾಸನೆ ಬೀರುತ್ತಿದೆ" ಎಂದು ಸ್ಥಳೀಯ ನಿವಾಸಿ ಮನೀಶ್ ಶೆಟ್ಟಿ ಪಾದೂರು ತಿಳಿಸಿದ್ದಾರೆ.
ಮಜೂರು ಗ್ರಾಮ ಪಂಚಾಯತ್ ಅಧಿಕಾರಿಗಳು ತಕ್ಷಣವೇ ಬಿದ್ದಿರುವ ಮರವನ್ನು ತೆರವುಗೊಳಿಸಬೇಕು, ನಿಂತ ನೀರನ್ನು ತೆರವುಗೊಳಿಸಲು ವ್ಯವಸ್ಥೆ ಮಾಡಬೇಕು ಮತ್ತು ತ್ಯಾಜ್ಯ ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.