ಉಡುಪಿ, ಫೆ. 21 (DaijiworldNews/AA): ಮಲ್ಪೆ ಬಂದರು ಸಮೀಪ ಮೀನುಗಾರರೊಬ್ಬರ ಮೇಲೆ ಹಲ್ಲೆ ನಡೆಸಿ, ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಎಗರಿಸಿದ ಘಟನೆ ನಡೆದಿದೆ.

ಮಲ್ಪೆಯ ಬಡಾನಿಡಿಯೂರು ಗ್ರಾಮದ ನಿವಾಸಿ ದಯಾನಂದ ಕುಂದರ್ (61) ಎಂಬುವವರು ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಮತ್ತು ಮೀನು ವ್ಯಾಪಾರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಫೆಬ್ರವರಿ 20ರಂದು ಎಂದಿನಂತೆ ಬೆಳಿಗ್ಗೆ 3 ಗಂಟೆಗೆ ಅವರು ಕೆಲಸಕ್ಕಾಗಿ ಬಂದರಿಗೆ ಬಂದಿದ್ದರು.
ಬೆಳಿಗ್ಗೆ ಸುಮಾರು 4:30ಕ್ಕೆ ಅವರು ಬಂದರು ಆವರಣದಲ್ಲಿರುವ ಕಚೇರಿಯ ಶೌಚಾಲಯಕ್ಕೆ ತೆರಳಿದ್ದರು. 4:40ರ ಸುಮಾರಿಗೆ ವಾಪಸ್ ಬರುತ್ತಿದ್ದಾಗ, ಅಪರಿಚಿತನೊಬ್ಬ ಮೀನಿನ ಬಗ್ಗೆ ವಿಚಾರಿಸುವ ನೆಪದಲ್ಲಿ ದಯಾನಂದ ಅವರನ್ನು ಸಮೀಪಿಸಿದ್ದಾನೆ. ತಕ್ಷಣವೇ ಆ ವ್ಯಕ್ತಿ ದಯಾನಂದ ಅವರ ಮುಖಕ್ಕೆ ಖಾರದ ಪುಡಿ ಎರಚಿ, ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದಾನೆ. ಅಷ್ಟರಲ್ಲಿ ಇನ್ನುಳಿದ ಇಬ್ಬರು ಆರೋಪಿಗಳು ಸೇರಿಕೊಂಡು, ಚಾಕು ತೋರಿಸಿ ಬೆದರಿಕೆ ಹಾಕಿ ಚಿನ್ನದ ಸರ ನೀಡುವಂತೆ ಪೀಡಿಸಿದ್ದಾರೆ.
ದಯಾನಂದ ಅವರು ಸರ ನೀಡಲು ನಿರಾಕರಿಸಿದಾಗ, ಮುತ್ತಣ್ಣ ಎಂಬಾತ ಮತ್ತು ಆತನ ಇಬ್ಬರು ಸಹಚರರು ದಯಾನಂದ ಅವರ ಮುಖ ಹಾಗೂ ಬೆನ್ನಿಗೆ ಹಲ್ಲೆ ನಡೆಸಿದ್ದಾರೆ. ಬಳಿಕ ಬಲವಂತವಾಗಿ ಅವರ ಕುತ್ತಿಗೆಯಲ್ಲಿದ್ದ ಸುಮಾರು ಆರು ಪವನ್ ತೂಕದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 6 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.