ಮಂಗಳೂರು, ಫೆ. 21 (DaijiworldNews/AA): ಹೊರ ರಾಜ್ಯದಿಂದ ಗಾಂಜಾವನ್ನು ತಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಬಳಿ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ಪೊಲೀಸರು ಫೆ. 21ರಂದು ಬಂಧಿಸಿದ್ದು, ಸುಮಾರು 22.25 ಕೆ.ಜಿ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಮಹಾರಾಷ್ಟ್ರದ ಜಲಗಾಂ ಜಿಲ್ಲೆಯ ಚೊಪ್ಪಡ ತಾಲೂಕಿನ ಸಮತಾ ನಗರ ನಿವಾಸಿ ಕರಣ್ ಬಾಬು ರಾಂ ಜಾದವ್ (27), ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಚಪಡದ ತಾಶಿಲ್ ಬಗಳಿ ನಿವಾಸಿ ಸಮೀರ್ ಶಾ (19), ಉಡುಪಿಯ ಹೆಜಮಾಡಿ ಗ್ರಾಮದ ನಿವಾಸಿ ಎಂ.ಹೆಚ್. ಮಯ್ಯದಿ (48), ಮಂಗಳೂರಿನ ಕುದ್ರೋಳಿಯ ಕರ್ಬಾಲ ರೋಡ್ ನಿವಾಸಿ ಪ್ರಸ್ತುತ ಮಂಗಳೂರಿನ ಕಾವೂರಿನಲ್ಲಿ ವಾಸಿಸುತ್ತಿರುವ ಇಬ್ರಾಹಿಂ ಕಲೀಲ್ (47) ಎಂಬವರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಆರೋಪಿಗಳ ಬಳಿಯಿದ್ದ ಅಂದಾಜು 11,12,500 ರೂ. ಮೌಲ್ಯದ 22.25 ಕೆ.ಜಿ ಗಾಂಜಾ, ಅಂದಾಜು 18,000 ರೂ. ಮೌಲ್ಯದ 6 ಮೊಬೈಲ್ ಪೋನ್ ಗಳು ಹಾಗೂ ಅಂದಾಜು 1,00,000 ರೂ. ಮೌಲ್ಯದ ಗಾಂಜಾ ಸಾಗಿಸಲು ಬಳಸಿದ ಎರಡು ಸ್ಕೂಟರ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ವಶಕ್ಕೆ ಪಡೆದ ಸೊತ್ತುಗಳ ಒಟ್ಟು ಮೌಲ್ಯ 12,30,500 ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳ ಪೈಕಿ ಕರಣ್ ಬಾಬು ರಾಂ ಜಾದವ್ ಮತ್ತು ಸಮೀರ್ ಶಾ ಎಂಬವರು ಗಾಂಜಾವನ್ನು ಮಹಾರಾಷ್ಟ್ರ ಮಯ್ಯದಿ ಹಾಗೂ ಮಧ್ಯ ಪ್ರದೇಶ ಶಾರೂಕ್ ಎಂಬವರಿಂದ ಖರೀದಿಸಿದ್ದಾರೆ. ಬಳಿಕ ಆರೋಪಿಗಳಾದ ಎಂ.ಹೆಚ್. ಮಯ್ಯದಿ ಹಾಗೂ ಇಬ್ರಾಹಿಂ ಕಲೀಲ್ ಗೆ ನೀಡಿದ್ದಾರೆ. ಈ ಇಬ್ಬರು ಗಾಂಜಾವನ್ನು ಉಡುಪಿ, ಮಲ್ಪೆ, ಕಾರ್ಕಳ, ಮುಲ್ಕಿ, ಸುರತ್ಕಲ್, ಪಣಂಬೂರು, ಹಾಗೂ ಮಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದುದಾಗಿ ತಿಳಿದುಬಂದಿದೆ. ಈ ಹಿಂದೆ ಕೂಡಾ ಹಲವು ಭಾರಿ ಗಾಂಜಾವನ್ನು ಅಕ್ರಮವಾಗಿ ತಂದು ಉಡುಪಿ ಜಿಲ್ಲೆ ಮತ್ತು ಮಂಗಳೂರು ನಗರದಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ.
ಆರೋಪಿಗಳು ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಬಳಿ ಗಾಂಜಾವನ್ನು ಮಾರಾಟ ಮಾಡಲು ಹೊರ ರಾಜ್ಯದಿಂದ ತಂದಿರುವ ಬಗ್ಗೆ ಮಾಹಿತಿ ತಿಳಿದ ಆಧಾರದ ಮೇರೆಗೆ ಉತ್ತರ ಉಪ ವಿಭಾಗದ ಎ.ಸಿ.ಪಿ. ರವರು ಮತ್ತು ಅವರ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಪಣಂಬೂರು ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಇನ್ನು ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.21/2026 ಕಲಂ:8(C), 20(b),(ii)(C) NDPS Act ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.