ಕಾಪು, ಫೆ. 21 (DaijiworldNews/AA): ಶನಿವಾರ ಬೆಳಿಗ್ಗೆ ಶಂಕರಪುರದಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಶಿರ್ವ ಪೊಲೀಸರು ಯಶಸ್ವಿಯಾಗಿದ್ದು, ಘಟನೆ ನಡೆದ ಕೇವಲ 3-4 ಗಂಟೆಗಳ ಒಳಗಾಗಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ನಿವಾಸಿ ಆನಂದ್ (49), ಹಳಿಯಾಳದ ಕಿರಣ್ ಧರ್ಮರಾಜ್ ಗೋಡಿಮನಿ (19) ಮತ್ತು ಹಳಿಯಾಳದ ಶಶಿಧರ (19) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಫೆಬ್ರವರಿ 21ರ ಬೆಳಿಗ್ಗೆ ಸುಮಾರು 9:30ಕ್ಕೆ ಕುರ್ಕಾಲು ಗ್ರಾಮದ ಶಂಕರಪುರ ನಿವಾಸಿ ಹೆಲೆನ್ ಡಿಸೋಜಾ (69) ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಮಲ್ಲಿಗೆ ಹೂವು ಕಟ್ಟುತ್ತಿದ್ದಾಗ, ಹಳೆಯ ಬಾಡಿಗೆದಾರನಾಗಿದ್ದ ಆನಂದ್ ತನ್ನ ಇಬ್ಬರು ಸಹಚರರೊಂದಿಗೆ ಬಾಡಿಗೆ ಮನೆ ವಿಚಾರಿಸಲು ಬಂದಿದ್ದ. ಅವರು ನೀಡಿದ ಟೀ ಕುಡಿದು ಮಾತನಾಡಿದ ಬಳಿಕ, ಮನೆ ಲಭ್ಯವಿಲ್ಲ ಎಂದು ತಿಳಿದು ಪಕ್ಕದ ಮನೆಗೆ ತೆರಳಿದ್ದರು.
ಬೆಳಿಗ್ಗೆ 9:45ರ ಸುಮಾರಿಗೆ, ಆರೋಪಿಗಳಲ್ಲಿ ಒಬ್ಬ ವಾಪಸ್ ಬಂದು ಹೆಲೆನ್ ಅವರ ಮೊಬೈಲ್ ಸಂಖ್ಯೆ ಕೇಳಿದ್ದಾನೆ. ಅವರು ಸಂಖ್ಯೆ ನೀಡುತ್ತಿದ್ದಂತೆ ಹಠಾತ್ತನೆ ಅವರ ಕುತ್ತಿಗೆಗೆ ಕೈಹಾಕಿ 28 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾನೆ. ಅಡ್ಡ ಬಂದ ಅವರ ಸಹೋದರಿ ಥೆರೆಸಾ ಅವರನ್ನು ತಳ್ಳಿಹಾಕಿ, ಮೂವರು ಆರೋಪಿಗಳು ಪಲ್ಸರ್ ಬೈಕ್ನಲ್ಲಿ ಪರಾರಿಯಾಗಿದ್ದರು. ದೋಚಿದ ಸರದ ಮೌಲ್ಯ ಸುಮಾರು 3.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ದೂರು ದಾಖಲಾಗುತ್ತಿದ್ದಂತೆ ಶಿರ್ವ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳು ಪಲ್ಸರ್ ಬೈಕ್ನಲ್ಲಿ ಪರಾರಿಯಾಗಿರುವುದು ಖಚಿತವಾಯಿತು. ಕೂಡಲೇ ಈ ಮಾಹಿತಿಯನ್ನು ಜಿಲ್ಲಾ ನಿಯಂತ್ರಣ ಕೊಠಡಿಯ ಮೂಲಕ ಎಲ್ಲಾ ಚೆಕ್ ಪೋಸ್ಟ್ಗಳಿಗೆ ರವಾನಿಸಲಾಯಿತು.
ಜಿಲ್ಲಾದ್ಯಂತ ತೀವ್ರ ನಾಕಾಬಂದಿ ನಡೆಸಿದ ಪರಿಣಾಮ, ಬೈಂದೂರಿನ ಶಿರೂರು ಚೆಕ್ ಪೋಸ್ಟ್ ಬಳಿಕ ಬೈಂದೂರು ಪೊಲೀಸರು ಆರೋಪಿಗಳನ್ನು ತಡೆಹಿಡಿದು ವಶಕ್ಕೆ ಪಡೆದರು. ನಂತರ ಅವರನ್ನು ಶಿರ್ವ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಆರೋಪಿಗಳಿಂದ ದೋಚಿದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಕಾಪು ಸಿಪಿಐ ಅಜ್ಮತ್ ಅಲಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಶಿರ್ವ ನಿರೀಕ್ಷಕ ಮಂಜುನಾಥ ಮರಬದ, ಬೈಂದೂರು ಪಿಎಸ್ಐ ಸುನೀಲ್ ಕುಮಾರ್, ಸಿಬ್ಬಂದಿಗಳಾದ ದಯಾನಂದ ಪ್ರಭು, ಅನ್ವರ್ ಅಲಿ, ಹರೀಶ್, ಯಲ್ಲಾಲಿಂಗ, ಸುರೇಶ್ ಹಾಗೂ ಬೈಂದೂರು ಠಾಣೆಯ ಸಿಬ್ಬಂದಿಗಳು ಭಾಗವಹಿಸಿದ್ದರು.