ಕುಂದಾಪುರ,ಜೂ 30 (Daijiworld News/RD): ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೊಲೆರೋ ವಾಹನವೊಂದು ಡಿಕ್ಕಿಯಾದ ಪರಿಣಾಮ ಪಾದಾಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೆಮ್ಮಾಡಿ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಅಪಘಾತದಲ್ಲಿ ಸಾವಿಗೀಡಾದ ಪಾದಾಚಾರಿಯನ್ನು ಹೆಮ್ಮಾಡಿಯ ಸಂತೋಷನಗರದ ನಿವಾಸಿ ಕುಷ್ಟ ಯಾನೆ ಕೃಷ್ಣ ಪೂಜಾರಿ (48) ಎಂದು ಗುರುತಿಸಲಾಗಿದೆ. ಕೃಷ್ಣ ಪೂಜಾರಿ ಕೆಲಸದ ನಿಮಿತ್ತ ಹೆಮ್ಮಾಡಿ ಪೇಟೆಗೆ ಬಂದವರು ವಾಪಾಸ್ಸು ಮನೆಗೆ ನಡೆದು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಅಪಘಾತಕ್ಕೆ ಕಾರಣವಾದ ಬೊಲೆರೋ ವಾಹನವು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಪ್ರಯಾಣಿಸುತ್ತಿದ್ದು, ಅಪಘಾತ ನಡೆಸಿ ಪರಾರಿಯಾಗಲು ಯತ್ನಿಸಿತ್ತು. ಆದರೆ ಸ್ಥಳೀಯರ ಸಮಯಪ್ರಜ್ಞೆಯಿಂದ ವಾಹನವನ್ನು ಅಡ್ಡಗಟ್ಟಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ಸಾಗಿಸಲಾಗಿದೆ.