ಕುಂದಾಪುರ, ಫೆ. 22 (DaijiworldNews/TA): ಅಪ್ಪಣ್ಣ ಹೆಗ್ಡೆ ಸರ್ವಧರ್ಮ ಸಮನ್ವಯದ ಕೊಂಡಿ. ಮಾನವೀಯ ಧರ್ಮ ಎತ್ತಿ ಹಿಡಿದವರು. ಅವರೊಬ್ಬ ವ್ಯಕ್ತಿಯಲ್ಲ, ಶಕ್ತಿ. ಅನಂತ ಶೇಷನಿರುವ ತನಕ ಅವರ ಹೆಸರು ಈ ಭುವಿಯಲ್ಲಿ ಶಾಶ್ವತವಾಗಿರುತ್ತದೆ ಎಂದು ಬಾರಕೂರು ಮಹಾ ಸಂಸ್ಥಾನದ ಪೀಠಾಧೀಶ ಶ್ರೀಸಂತೋಷ ಗುರೂಜಿ ನುಡಿದರು.

ಬಸ್ರೂರು ಶಾರದಾ ಕಾಲೇಜು ವಠಾರದಲ್ಲಿ ಅಪ್ಪಣ್ಣ ಹೆಗ್ಡೆ ಕುಟುಂಬಸ್ಥರು, ಅಭಿಮಾನಿಗಳು ಆಯೋಜಿಸಿದ್ದ ನುಡಿನಮನ ಕಾಠ್ಯಕ್ರಮದಲ್ಲಿ ಮಾತನಾಡಿದರು. ಜೀವನದ 88 ವರ್ಷಗಳ ಕಾಲ ಅತ್ಯಂತ ಲವಲವಿಕೆ ಯಿಂದ ಓಡಾಡಿಕೊಂಡಿದ್ದವರು. ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮದೆ ಆದ ಛಾಪು ಮೂಡಿಸಿದವರು. ಬಾರಕೂರು ಭಾರ್ಗವ ಮಹಾಸಂಸ್ಥಾನ ರೂಪಿಸುವಲ್ಲಿಯೂ ಮಹತ್ತರ ಪಾತ್ರ ವಹಿಸಿದವರು ಎಂದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ನುಡಿನಮನ ಸಲ್ಲಿಸಿ, ಸಂಘರ್ಷವಿಲ್ಲದೆ ಸಮಾಜ ಕಟ್ಟಿದ ಮಹಾನ್ ನಾಯಕ ಹೆಗ್ಡೆ. ಪ್ರಭಾವಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ಒಡನಾಡಿಯಾಗಿದ್ದರು ಎಂದರು. ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪ್ಪಣ್ಣ ಹೆಗ್ಡೆ ದೊಡ್ಡ ಶಕ್ತಿಯಾಗಿದ್ದರು. ಅವರ ಸರಳ ಸಜ್ಜನಿಕೆಯ ಬದುಕು ಊಹಿಸಲು ಅಸಾಧ್ಯ. ಶಿಕ್ಷಣ, ಧಾರ್ಮಿಕ, ರಾಜಕೀಯ, ಸಾಮಾಜಿಕ ಸಹಿತ ಎಲ್ಲ ಕ್ಷೇತ್ರಗಳಲ್ಲಿಯೂ ಪರಿಶುದ್ಧತೆ ಇಟ್ಟುಕೊಂಡ ಅಪರೂಪದ ವ್ಯಕ್ತಿ ಎಂದು ಹೇಳಿದರು.
ಖ್ಯಾತ ಉದ್ಯಮಿ ಬಂಜಾರ ಪ್ರಕಾಶ್ ಶೆಟ್ಟಿ, ಡಾ.ಎಂ.ಶಾಂತಾರಾಮ ಶೆಟ್ಟಿ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಕುಂದಾಪುರ ಶಾಸಕ ಕಿರಣ್ ಕುಮಾರ ಕೊಡ್ಡಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರದ ಮುಂದಾಳು ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿದರು. ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ , ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ವಾಲ್ ಸುವರ್ಣ, ಅಪ್ಪಣ್ಣ ಹೆಗ್ಡೆ ಅವರ ಮಕ್ಕಳಾದ ರಾಮ್ ಕಿಶನ್ ಹೆಗ್ಡೆ, ರಾಮ ರತನ್ ಹೆಗ್ಡೆ, ಅನುಪಮ ಶೆಟ್ಟಿ ನಿರುಪಮ ಶೆಟ್ಟಿ ಪ್ರೀತಮ್ ರೈ, ಡಾ.ಸುಶಾಂತ್ ರೈ ಮಂಗಳೂರು, ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ,ಹಿರಿಯ ನ್ಯಾಯವಾದಿಗಳಾದ ಎ.ಬಿ. ಶೆಟ್ಟಿ ಟಿ.ಬಿ.ಶೆಟ್ಟಿ ಉಪಸ್ಥಿತರಿದ್ದರು.