ಕಾಸರಗೋಡು ಡಿ 17 : ಫೇಸ್ ಬುಕ್ ನಲ್ಲಿ ಪರಿಚಯಗೊಂಡ ವ್ಯಕ್ತಿಯೊಬ್ಬ ಹಲವರಿಗೆ ಪಂಗನಾಮ ಹಾಕಿದ ಘಟನೆ ಕಾಸರಗೋಡಿನ ಹೊಸದುರ್ಗದಲ್ಲಿ ನಡೆದಿದೆ. ಅದ್ಯಾಪಿಕೆ ಸಹಿತ ಹಲವರನ್ನು ಪರಿಚಯ ಮಾಡಿಗೊಂಡಿದ್ದ ವ್ಯಕ್ತಿ ಕೋಟ್ಯಾಂತರ ರೂಪಾಯಿ ಗುಳುಂ ಮಾಡಿದ ಬಗ್ಗೆ ಇದೀಗ ಬೇಡಗಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೋನ್ ಬ್ಲ್ಯಾಕ್ ಎಂಬಾತ ಯು.ಕೆಯಲ್ಲಿ ಇದ್ದುಕೊಂಡೆ ಫೇಸ್ ಬುಕ್ ನಲ್ಲಿ ಅಧ್ಯಾಪಿಕೆ ಸಹಿತ ಹಲವರನ್ನು ಸಂಪರ್ಕಿಸಿ ಕೋಟ್ಯಾಂತರ ರೂಪಾಯಿ ವಂಚಿಸಿದ್ದಾನೆ ಎನ್ನಲಾಗಿದೆ. ಮೊದಲಿಗೆ 3 ಕೋಟಿ ರೂಪಾಯಿ ಲಾಟರಿ ಹೊಡೆದಿದೆ ಎಂದು ವಂಚಿಸಿ ಬಳಿಕ ನಯವಾಗಿ ಮಾತನಾಡಿ ಈ ಹಣ ಲಭಿಸಲು ತೆರಿಗೆ ಹಾಗೂ ಮತ್ತಿತರ ರೂಪದಲ್ಲಿ ಪಾವತಿಸಲು ಎಂದು ಸುಮಾರು 12 ಲಕ್ಷಕ್ಕೂ ಹೆಚ್ಚು ಹಣವನ್ನು ಲಪಟಾಯಿಸಿದ್ದಾನೆ. ಇದಲ್ಲದೆ ಮತ್ತೆ 25 ಲಕ್ಷಕ್ಕೆ ಬೇಡಿಕೆ ಇಟ್ಟಾಗ ಸಂಶಯಗೊಂಡ ಅಧ್ಯಾಪಿಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಮೋಸದ ಜಾಲದ ಬೆನ್ನು ಹತ್ತಿದ್ದ ಪೊಲೀಸರಿಗೆ ಇದೇ ರೀತಿಯ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಬೃಹತ್ ಬ್ಯಾಂಕ್ ನಲ್ಲಿ ಖಾತೆ ತೆರೆದ ಈತ ಬಳಿಕ ಹಲವರನ್ನು ಮೋಸದ ಜಾಲಕ್ಕೆ ಬೀಳಿಸಿ ಹಣ ಸ್ವಾಹ ಮಾಡಲಾರಂಭಿಸಿದ್ದಾನೆ. ತನಿಖೆಯ ಸಂದರ್ಭ ದೆಹಲಿಯ ಎಟಿಎಂ ನಿಂದ ಹಣವನ್ನು ಪಡೆದಿರುವುದು ಬೆಳಕಿಗೆ ಬಂದಿದೆ. ಈ ಮೋಸ ಜಾಲದ ವಿರುದ್ದ ಆದೂರು ಸಿಐ, ಎಸ್.ಐ ಒಳಗೊಂಡ ಪೊಲೀಸ್ ತಂಡ ತನಿಖೆಗೆ ಚಾಲನೆ ನೀಡಿದೆ.