ಉಡುಪಿ, ಜು30(Daijiworld News/SS): ಮನೆಯಲ್ಲಿ ಒಂಟಿ ಮಹಿಳೆಯರು ಇರುವ ಸಂದರ್ಭದಲ್ಲಿ ಯಾವುದೇ ಅಪರಿಚಿತ ವ್ಯಕ್ತಿಗಳನ್ನು ಮನೆಯ ಆವರಣದ ಒಳಗೆ ಸೇರಿಸಬಾರದು ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಇರಾನಿ ಗ್ಯಾಂಗ್ ಎಂಬ ಹೆಸರಿನ ಹೊರ ರಾಜ್ಯಗಳಿಂದ ಬಂದ ಕಳ್ಳರು ಕಂಬಳಿ ಇತರೆ ಹೊದಿಕೆ ಬೆಡ್ ಶೀಟ್, ಗೃಹಪಯೋಗಿ ಸಂಬಂಧಿತ ವಸ್ತುಗಳನ್ನು ಮಾರುವ ನೆಪದಲ್ಲಿ ಮಾರುವೇಷದಲ್ಲಿ ಬಂದು ಮನೆಕಳ್ಳತನ ದರೋಡೆ ಸುಲಿಗೆಗಳನ್ನು ಮಾಡುತ್ತಿದ್ದು, ಅವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ರವಾನೆಯಾಗುತ್ತಿವೆ. ಆದರೆ ಜಿಲ್ಲೆಯಲ್ಲಿ ಈವರೆಗೆ ಇಂತಹ ಯಾವುದೇ ಘಟನೆಗಳು ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಯಾವುದೇ ಅಪರಿಚಿತ ವ್ಯಕ್ತಿಗಳನ್ನು ಮನೆಯ ಆವರಣದ ಒಳಗೆ ಸೇರಿಸಬಾರದು. ಮನೆಯ ಬಳಿ ಯಾರಾದರೂ ಅಪರಿಚಿತರು ಅಥವಾ ಮಾರಾಟಗಾರರು ಅನುಮಾನಾಸ್ಪದವಾಗಿ ಕಂಡು ಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ನಂಬ್ರ 100 ಅಥವಾ 0820-2526444 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಇರಾನಿ ಗ್ಯಾಂಗ್ನಿಂದ ಮನೆ ಕಳ್ಳತನ, ದರೋಡೆ ನಡೆಯುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಬಗ್ಗೆ ಸಾರ್ವಜನಿಕರು ಅನಾವಶ್ಯಕವಾಗಿ ಭಯಭೀತರಾಗದೇ ಅಪರಿಚಿತರ ಬಗ್ಗೆ ಜಾಗೃತಿ ವಹಿಸುವಂತೆ ಜಿಲ್ಲಾ ಪೊಲೀಸ್ ಸ್ಪಷ್ಟ ಪಡಿಸಿದೆ.