ಉಡುಪಿ, ಫೆ. 22 (DaijiworldNews/TA): ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರತಾಪ್ ಚಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ವತಿಯಿಂದ ಸಿದ್ದಾಪುರ ಏತನೀರಾವರಿ ಯೋಜನೆಯ ಕಾಮಗಾರಿ ಪ್ರದೇಶವನ್ನು ವಿಸ್ತೃತವಾಗಿ ವೀಕ್ಷಣೆ ಮಾಡಲಾಯಿತು.

ಯೋಜನೆಯ ಪ್ರಗತಿ, ಕಾಮಗಾರಿಯ ಗುಣಮಟ್ಟ ಹಾಗೂ ನೀರು ಪೂರೈಕೆಯಿಂದ ಲಾಭವಾಗುವ ಕೃಷಿ ಭೂಮಿ ವ್ಯಾಪ್ತಿಯ ಬಗ್ಗೆ ರೈತ ಸಂಘದ ಪದಾಧಿಕಾರಿಗಳು ಮತ್ತು ಸ್ಥಳೀಯ ರೈತರು ಪರಿಶೀಲನೆ ನಡೆಸಿದರು. ಕಾಮಗಾರಿ ವೀಕ್ಷಣೆ ಬಳಿಕ ಸಿದ್ದಾಪುರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಪ್ರತಾಪ್ ಚಂದ್ರ ಶೆಟ್ಟಿ ಅವರು, ನೀರಿನ ಕೊರತೆಯಿಂದ ಬಳಲುತ್ತಿರುವ ಕೃಷಿ ಪ್ರದೇಶಗಳಿಗೆ ಏತನೀರಾವರಿ ಯೋಜನೆಯ ಮೂಲಕ ಸಮರ್ಪಕ ನೀರು ಒದಗಬೇಕು ಎಂದು ಒತ್ತಿಹೇಳಿದರು.
ಯೋಜನೆಯಿಂದ ನಿಜವಾದ ಫಲಾನುಭವಿಗಳಿಗೆ ನೀರು ತಲುಪುವಂತೆ ಪಾರದರ್ಶಕ ಅನುಷ್ಠಾನ ಅಗತ್ಯವಿದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಯೋಜನೆಯ ಮುಂದಿನ ಹಂತಗಳು, ಸಮಯಬದ್ಧ ಪೂರ್ಣಗೊಳಿಕೆ ಹಾಗೂ ರೈತರ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.