ಮಂಗಳೂರು, ಫೆ. 24 (DaijiworldNews/TA): ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮದೊಂದಿಗೆ 77 ಅರ್ಹ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಮಂಗಳೂರಿನ ಎಸ್ ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.












ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ಸಹಕಾರಿ ರಂಗದಲ್ಲಿ ರಾಜೇಂದ್ರ ಕುಮಾರ್ ರ ಸಾಧನೆ, ಸಹಕಾರಿ ಬ್ಯಾಂಕನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಇಂತಹ ಸಾಧಕರಿಗೆ ಸನ್ಮಾನ ಮಾಡುವುದರಿಂದ ಭವಿಷ್ಯದಲ್ಲಿ ಈ ರೀತಿಯ ಸಾಧನೆಗೈಯಲು ಯುವಜನರಿಗೆ ಪ್ರೇರಣೆ ಆಗಲಿದೆ. ಅವರ ನೇತೃತ್ವದಲ್ಲಿ ಸಹಕಾರ ರಂಗ ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ ಎಂದು ಶುಭ ಹಾರೈಸಿದರು. ಇದೇ ವೇಳೆ ಅಭಿವಂದನಾ ಭಾಷಣ ಮಾಡಿದ ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ, ಸಹಕಾರಿ ರಂಗದ ಸ್ಥಾನಕ್ಕೆ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಸರ್ವರಿಗೆ ಸಮಬಾಳು ಸರ್ವರಿಗೂ ಸಮಪಾಲು ಎಂಬ ಧ್ಯೇಯದೊಂದಿಗೆ ನೆಹರು ಅವರ ಸಹಕಾರಿ ರಂಗದ ಯೋಜನೆಯಂತೆ ಸಹಕಾರ ರಂಗವನ್ನು ಮುನ್ನಡೆಸಿದ್ದಾರೆ. ಅವರ 45 ವರ್ಷಗಳ ಸಹಕಾರ ರಂಗದ ಸಾಧನೆಯತ್ತ ಕಣ್ಣೋಟ ಹರಿಸಿದಾಗ, ದೇಶದ ಬ್ಯಾಂಕ್ ಕ್ಷೇತ್ರದಲ್ಲಿ ಧ್ರುವ ತಾರೆಯಂತೆ ಕಂಗೊಳಿಸಿದವರು ಎಂದರು.
ಅಭಿನಂದನೆ ಸ್ವೀಕರಿಸಿದ ಡಾ.ಎಂ.ಎನ್ .ರಾಜೇಂದ್ರ ಕುಮಾರ್ ಮಾತನಾಡಿ, ದೇಶದ 459 ಜಿಲ್ಲಾ ಸಹಕಾರಿ ಬ್ಯಾಂಕುಗಳ ಪೈಕಿ ಎಸ್ ಸಿ ಡಿಸಿಸಿ ಬ್ಯಾಂಕ್ ಪ್ರಥಮ ಸ್ಥಾನದಲ್ಲಿ ಇದೆ ಎನ್ನುವ ಬಗ್ಗೆ ನಬಾರ್ಡ್ ನೀಡಿದ ಗೌರವ ತನಗೆ ತೃಪ್ತಿ ನೀಡಿದೆ ಎಂದರು. ಸಮಾರಂಭದಲ್ಲಿ, ಶಾಸಕ ವೇದವ್ಯಾಸ ಕಾಮತ್, ಅಭಿವಂದನಾ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ನಬಾರ್ಡ್ ಡಿಜಿಎಂ ಜಗದೀಶ್, ದ.ಕ. ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ದೇವರಾಜ್, ರಾಜ್ಯ ಸಹಕಾರಿ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಲಿಂಗರಾಜು, ಬ್ಯಾಂಕಿನ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಾಲ್ಯೊಟ್ಟು ಮೊದಲಾದವರು ಉಪಸ್ಥಿತರಿದ್ದರು.