ಮಂಗಳೂರು, ಜು 30 (DaijiworldNews/SM): ಮಂಗಳೂರಿನ ತೊಕ್ಕೊಟ್ಟು ಸಮೀಪದ ನೇತ್ರಾವತಿ ನದಿಯ ಸೇತುವೆ ಬಳಿಯಿಂದ ಸೋಮವಾರ ಸಂಜೆ ನಿಗೂಢವಾಗಿ ನಾಪತ್ತೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಪತ್ತೆಗಾಗಿ ಶೋಧಕಾರ್ಯ ತೀವ್ರಗೊಂಡಿದೆ.
ನಿನ್ನೆ ಸಂಜೆಯಿಂದಲೇ ನದಿಯಲ್ಲಿ ಈಜು ಪಟುಗಳು ಪೊಲೀಸರು ಕೋಸ್ಟ್ ಗಾರ್ಡ್ ತಂಡದ ಸಿಬ್ಬಂದಿಗಳು ಪತ್ತೆಗಾಗಿ ಶ್ರಮಿಸುತ್ತಿದ್ದಾರೆ. ಸಿದ್ದಾರ್ಥ್ ಹಾರುವಾಗ ನಾನು ನೋಡಿದ್ದೇನೆ ಎಂದು ಹೇಳಿರುವ ಮೀನುಗಾರ ಸೈಮನ್ ಡಿಸೋಜ ಅವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಲಾಗಿದೆ.
ಇದೀಗ ಸಿದ್ದಾರ್ಥ್ ನಾಪತ್ತೆ ಕುರಿತಾಗಿ ಹೇಳಿಕೆ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್, ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆಯನ್ನು ತೀವ್ರಗೊಳಿಸಿದ್ದೇವೆ. ಈ ನಿಗೂಢ ಪ್ರಕರಣವನ್ನು ಬಯಲಿಗೆ ತರಲು ನಾಲ್ಕು ತನಿಖಾ ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ ಸಿಟಿ ಕ್ರೈಮ್ ಬ್ರಾಂಚ್ ಹಾಗೂ ಪೊಲಿಸ್ ಇನ್ಸ್ ಪೆಕ್ಟರ್ ಗಳ ತಂಡ ಸೇರಿದಂತೆ ಒಟ್ಟು ನಾಲ್ಕು ತಂಡಗಳು ಈ ಪ್ರಕರಣದ ನಿಜಾಂಶವನ್ನು ಪತ್ತೆ ಹಚ್ಚಿ ವರದಿ ನೀಡಲಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.
ಸಿಸಿಬಿ ತಂಡ ಬೆಂಗಳೂರಿನಲ್ಲಿರುವ ಸಿದ್ದಾರ್ಥ ಅವರ ಮನೆ ಮತ್ತು ಕಚೇರಿಗೆ ತೆರಳಿದ್ದು ಅಲ್ಲಿ ವಿಚಾರಣೆ ನಡೆಸುತ್ತಿದ್ದಾರೆ, ಇನ್ನು ಮಂಗಳೂರಿನಲ್ಲಿರುವ ಪೊಲೀಸರ ತಂಡ ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಒಟ್ಟು ಪ್ರಕರಣವನ್ನು ನಾವು ಶೀಘ್ರವೇ ಬೇಧಿಸಲಿದ್ದೇವೆ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.