ಉಡುಪಿ, ಜು 30 (DaijiworldNews/SM): ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2016ರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಗೂಡ್ಸ್ ಟೆಂಪೋ, ಕಾರುಗಳನ್ನು ಕಳವು ಮಾಡಿ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಅಂತರ್ರಾಜ್ಯ ವಾಹನ ಕಳ್ಳರ ತಂಡವನ್ನು ಪತ್ತೆ ಹಚ್ಚಿ ಬಂಧಿಸಿ ಕಳವು ಮಾಡಿದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಯ್ಯದ್ ಮಜರ್ ಪಾಷಾ (23), ಕೆ. ಎಲಿಯಾಸ್ ಯಾನೆ ಬಾಬು (58), ಸಯ್ಯದ್ ಮೆಹಬೂಬ್ ಪಾಷಾ (57), ಜಿಯಾವುಲ್ ಹಕ್ (37) ಬಂಧಿತ ಆರೋಪಿಗಳು. ಆರೋಪಿಗಳನ್ನು ಬಂಧಿಸಿ ಕಳವುಗೈದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 4 ಮಹೀಂದ್ರ ಬೊಲೆರೋ ಪಿಕ್ಅಪ್ ವಾಹನಗಳು, 5 ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನಗಳು, 1 ಟೊಯೋಟ ಕ್ವಾಲಿಸ್, 1 ಮಾರುತಿ 800 ಕಾರನ್ನು ವಶಪಡಿಸಿಕೊಂಡಿರುತ್ತಾರೆ. ಇನ್ನು ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ:
2018ರ ಡಿಸೆಂಬರ್ ತಿಂಗಳ ಒಂದರಂದು ರಾತ್ರಿ ವೇಳೆಯಲ್ಲಿ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಾಜಿ ಟ್ರೇಡರ್ಸ್ ಅಂಗಡಿಯ ಎದುರುಗಡೆ ನಿಲ್ಲಿಸಿದ್ದ ಮಹೀಂದ್ರ ಬೊಲೊರೋ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕೆ. ಲಕ್ಷ್ಮೀನಾರಾಯಣ ಭಂಡಾರ್ಕರ್ ಎಂಬವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2019ರ ಜೂನ್ 16ರಂದು ಕಾಪು ಠಾಣಾ ವ್ಯಾಪ್ತಿಯ ಕಟಪಾಡಿ ಕಲ್ಲಾಪು ಬಳಿ ನಿಲ್ಲಿಸಿದ್ದ ಮೊಹಮ್ಮದ್ ರಕೀಬ್ ಎಂಬವರ ಮಹೀಂದ್ರ ಪಿಕ್ಅಪ್ ವಾಹನವನ್ನು ಕಳವು ಮಾಡಿರುವ ಬಗ್ಗೆ ಕಾಫು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಟಪಾಡಿ ಚೆಕ್ಪೋಸ್ಟ್ನಲ್ಲಿ ತನಿಖೆ ನಡೆಸುತ್ತಿದ್ದ ಸಂದರ್ಭ ಬಂದ ಇಂಡಿಕಾ ಕಾರೊಂದನ್ನು ಪರಿಶೀಲಿಸಿದಾಗ ದಾಖಲೆಗಳಿಲ್ಲದಿರುವುದು ತಿಳಿದು ಬಂದಿದೆ. ಕಾರಿನಲ್ಲಿ ನಾಲ್ಕು ಮಂದಿ ಇದ್ದರು ಎಂದು ತಿಳಿದು ಬಂದಿದೆ. ಈ ಸಂದರ್ಭ ಆರೋಪಿಗಳು ದರೋಡೆ ನಡೆಸಿರುವುದು ತಿಳಿದು ಬಂದಿದೆ. ತನಿಖೆಯನ್ನು ಮುಂದುವರೆಸಿದಾಗ ಮತ್ತೆ ಕಳವು ಮಾಡಿರುವ ಕೆಲವು ವಾಹನಗಳ ಕಳವು ಪ್ರಕರಣಗಳ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.