ಮಂಗಳೂರು, ಜು 30 (DaijiworldNews/SM): ಮಂಗಳೂರಿನ ತೊಕ್ಕೊಟ್ಟು ಸಮೀಪದ ನೇತ್ರಾವತಿ ನದಿಯ ಸೇತುವೆ ಬಳಿಯಿಂದ ಸೋಮವಾರ ಸಂಜೆ ನಿಗೂಢವಾಗಿ ನಾಪತ್ತೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಪತ್ತೆಗಾಗಿ ಶೋಧಕಾರ್ಯ ತೀವ್ರಗೊಂಡಿದ್ದು, ಮಂಗಳವಾರ ರಾತ್ರಿಯ ವೇಳೆಯೂ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಮಾಜಿ ಸಚಿವ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಯಾಚರಣೆ ಮತ್ತೆ ಪುನರಾಂಭಗೊಳಿಸುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ.
ರಾತ್ರಿ ಸುಮಾರು 9 ಗಂಟೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿ ಕಾರ್ಯಾಚರಣೆಯಲ್ಲಿ ತೊಡಗಿದ ಎಲ್ಲರೂ ಕಿನಾರೆಗೆ ಆಗಮಿಸಿದ್ದರು. ಇದೇ ವೇಳೆ ಸ್ಥಳಕ್ಕಾಗಮಿಸಿದ ಮಾಜಿ ಸಚಿವ ಯು.ಟಿ. ಖಾದರ್ ಜಿಲ್ಲಾಧಿಕಾರಿಗಳನ್ನು ಕರೆ ಮಾಡಿ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ. ಸ್ಥಳದಲ್ಲಿ ಯಾರೂ ಇಲ್ಲದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆ ಮತ್ತೆ ಆರಂಭಿಸಬೇಕು. ಮತ್ತೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಬೇಕು ಎಂಬುವುದು ಸೂಚಿಸಿ ಖಾದರ್ ಸ್ಥಳದಲ್ಲೇ ಮೊಕ್ಕಂ ಹೂಡಿದ್ದರು.
ಬಳಿಕ ಮತ್ತೆ ಮುಳುಗುತಜ್ಞರು, ಅಗ್ನಿಶಾಮಕ ದಳ ಸಿಬ್ಬಂದಿಗಳು ಹಾಗೂ ಪೊಲೀಸರು ಮತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಎಷ್ಟೇ ಹುಡಿಕಿದರೂ 15 ಎಕರೆ ಕಾಫಿ ಎಸ್ಟೇಟ್ ಮಾಲಿಕ, ಸಾವಿರಾರು ಕೋಟಿ ಆಸ್ತಿ ಮಾಲಿಕ ಸಿದ್ದಾರ್ಥ್ ಕುರಿತ ಯಾವುದೇ ಸುಳಿವು ಇಲ್ಲಿಯ ತನಕ ಸಿಕ್ಕಿಲ್ಲ.