ಮಂಗಳೂರು, ಜು31(Daijiworld News/SS): ಸೋಮವಾರ ರಾತ್ರಿ ಮಂಗಳೂರು ಸಮೀಪದ ನೇತ್ರಾವತಿ ನದಿ ಸೇತುವೆ ಬಳಿಯಿಂದ ನಿಗೂಢವಾಗಿ ಕಾಣೆಯಾಗಿದ್ದ ಸಿದ್ದಾರ್ಥ್ ಅವರ ಮೃತದೇಹ ಬುಧವಾರ ಮುಂಜಾನೆ ಪತ್ತೆಯಾಗಿದೆ.
ಸುಮಾರು 36 ಗಂಟೆಗಳ ತೀವ್ರ ಶೋಧದ ನಂತರ ಹೊಯಿಗೆ ಬಜಾರ್ನ ಅಳಿವೆ (ನದಿ ಮತ್ತು ಸಮುದ್ರ ಸೇರುವ ಸ್ಥಳ) ಬಾಗಿಲ ಬಳಿ ಬುಧವಾರ ಬೆಳಗ್ಗೆ 6.30ಕ್ಕೆ ಸಿದ್ದಾರ್ಥ್ ಅವರ ದೇಹ ಪತ್ತೆಯಾಗಿದೆ.
ಸ್ಥಳೀಯ ಮೀನುಗಾರರು ಬೆಳಗ್ಗೆ ಮೀನುಗಾರಿಕೆಗೆಂದು ತೆರಳಿದ್ದಾಗ ನದಿ ದಡದಲ್ಲಿ ಮೃತದೇಹ ಕಂಡಿದೆ. ಇದು ಸಿದ್ಧಾರ್ಥ್ ಅವರ ಮೃತದೇಹವೇ ಇರಬಹುದೇ ಎಂಬ ಸಂಶಯದೊಂದಿಗೆ ಹತ್ತಿರಕ್ಕೆ ತೆರಳಿದ ಮೀನುಗಾರರಿಗೆ ಆ ದೇಹ ಸಿದ್ದಾರ್ಥ್ ಅವರದ್ದೇ ಎಂದು ಖಚಿತವಾಗಿದೆ.
ಸೋಮವಾರ ಬೆಳಗ್ಗೆ ಸಕಲೇಶಪುರಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದ ಸಿದ್ದಾರ್ಥ್ ಅವರು, ಮಂಗಳೂರಿಗೆ ತೆರಳಿದ್ದರು. ಉಳ್ಳಾಲ ಸೇತುವೆಯ ಮೇಲೆ ವಾಕಿಂಗ್ ಹೋಗುವ ವೇಳೆ ಏಕಾಏಕಿ ನಾಪತ್ತೆಯಾಗಿದ್ದರು. ಕಾರಿನ ಚಾಲಕ ಬಸವರಾಜು ಅವರು ನೀಡಿದ ಮಾಹಿತಿ ಆಧಾರದಲ್ಲಿ ಸೋಮವಾರ ರಾತ್ರಿ 9ಗಂಟೆಯಿಂದ ನದಿ, ಸಮುದ್ರ ಕಿನಾರೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಗೊಂಡಿತು. ಮಾರ್ಗದುದ್ದಕ್ಕೂ ಅವರು ಹಲವರಿಗೆ ಕರೆ ಮಾಡಿ ‘ಐ ಆ್ಯಮ್ ಸಾರಿ’ ಎಂದು ಹೇಳುತ್ತಿದ್ದರು ಎಂದು ಅವರ ಚಾಲಕ ಹೇಳಿಕೊಂಡಿದ್ದರು. ಇದೀಗ ಸಿದ್ದಾರ್ಥ್ ಅವರ ಮೃತದೇಹ ಮಂಗಳೂರಿನ ಹೊಯಿಗೆ ಬಜಾರ್ ಸಮುದ್ರ ಅಳಿವೆ ಬಾಗಿಲ ಬಳಿ ಪತ್ತೆಯಾಗಿದೆ. ಕೈಗೆ ಸ್ಮಾರ್ಟ್ ವಾಚ್ ಕಟ್ಟಿಕೊಂಡಿದ್ದು, ಪ್ಯಾಂಟ್ ಕಿಸೆಯಲ್ಲಿ ಮೊಬೈಲ್, ಕರ್ಚೀಫ್ ಪತ್ತೆಯಾಗಿದೆ.
ಮೃತದೇಹವನ್ನು ವೆನ್ಲಾಕ್ ಗೆ ತರಲಾಗಿದ್ದು, ಶವಮಹಜರು ಪ್ರಕ್ರಿಯೆ ನಡೆಯಲಿದೆ. ಶವಮಹಜರು ನಡೆದ ಬಳಿಕ ಅವರ ಸ್ವಗ್ರಾಮ ಚೆಟ್ನಹಳ್ಳಿಯ ಚೇತನಹಳ್ಳಿ ಎಸ್ಟೇಟ್'ಗೆ ಕೊಂಡೊಯ್ಯುವ ಸಾಧ್ಯತೆಯಿದೆ. ಈ ಬಗ್ಗೆ ಕುಟುಂಬ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.