ಮಂಗಳೂರು, ಜು 31 (Daijiworld News/MSP): ರಬ್ಬರ್ ಹಾಲನ್ನು( ರಬ್ಬರ್ ಲ್ಯಾಟೆಕ್ಸ್) ಭೂಮಿಗೂ ಹಾಗೂ ಮಾನವನಿಗೂ ಅಪಾಯಕಾರಿಯೆನಿಸಿರುವ ರಾಸಾಯನಿಕ ಆಸಿಡ್ ಬಳಸದೆ ಬಿಂಬುಳಿ (bilinje) ಎಂಬ ಹಣ್ಣಿನ ರಸವನ್ನು ಬಳಸಿ ಗುಣಮಟ್ಟದ ರಬ್ಬರ್ ಶೀಟ್( ಘನಿಕೃತ) ತಯಾರು ಮಾಡಿದ ಪರಿಸರ ಸ್ನೇಹಿ ರಬ್ಬರ್ ಸಂಶೋಧನೆ ಗ್ರಾಮೀಣ ಬಾಲಕರಾದ ಉಪ್ಪಿನಂಗಡಿಯ 16 ವರ್ಷದ ಅಮನ್ ಕೆ.ಎ ಹಾಗೂ ಎ.ಯು.ನಚಿಕೇತ ಕುಮಾರ್ ಅವರಿಗೆ ಇಂಟರ್ನೆಟ್ ದಿಗ್ಗಜ ಗೂಗಲ್ ಸಂಸ್ಥೆ ನೀಡುವ 'ನ್ಯಾಷನಲ್ ಜಿಯೋಗ್ರಾಫಿಕ್ ಎಕ್ಸ್ಪ್ಲೋರರ್ ಅವಾರ್ಡ್' ಲಭಿಸಿದೆ.
'ನ್ಯಾಷನಲ್ ಜಿಯೋಗ್ರಾಫಿಕ್ ಎಕ್ಸ್ಪ್ಲೋರರ್ ಅವಾರ್ಡ್' ನಲ್ಲಿ 14 ದೇಶಗಳಿಂದ 24 ತಜ್ಞರು ತೀರ್ಪುಗಾರರ ಮಂಡಳಿಯಲ್ಲಿದ್ದರು. ವಿಶ್ವದ ಹಲವು ದೇಶಗಳಿಂದ ಅನೇಕ ಯುವ ವಿಜ್ಞಾನಿಗಳ ಸಂಶೋಧನೆಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗಿತ್ತು.
ರಬ್ಬರ್ ಶೀಟ್ ನ್ನು ತಯಾರಿಸುವ ಸಂದರ್ಭದಲ್ಲಿ ರಬ್ಬರ್ ಅನ್ನು ಘನಿಕೃತ ಮಾಡಲು ರಾಸಾಯನಿಕ ಫಾರ್ಮಿಕ್ ಆ್ಯಸಿಡ್ ಬಳಸಲಾಗುತ್ತದೆ. ಆದರೆ ಇದು ಪರಿಸರಕ್ಕೆ ಮಾರಕ ಹಾಗೂ ಅಪಾಯಕಾರಿ ಕೂಡಾ ಆಗಿದೆ. ಆದರೆ ಪ್ರಾಕೃತಿಕವಾಗಿ ದೊರೆಯುವ ಬಿಂಬುಳಿ ಹಣ್ಣಿನ ರಸದಲ್ಲೂ ಈ ಆ್ಯಸಿಡ್ ಗುಣ ಇರುವುದರಿಂದ ಅದನ್ನೇ ಬಳಸಿ ರಬ್ಬರ್ ಶೀಟ್ ತಯಾರಿಸುವ ವಿಧಾನವನ್ನು ಅಮನ್ ಕೆ.ಎ ಹಾಗೂ ಎ.ಯು. ನಚಿಕೇತ ಅವರು ತಮ್ಮ ಸಂಶೋಧನೆಯಲ್ಲಿ ವಿವರಿಸಿದ್ದರು. ಇವರ ಈ ಸಂಶೋಧನೆಗೆ ಗೂಗಲ್ ಸಂಸ್ಥೆ ಗುರುತಿಸಿ ಗೌರವಿಸಿದೆ.
ಅಂದಹಾಗೆ ಯು ನಚಿಕೇತ್ ಕುಮಾರ್ ಉಪ್ಪಿನಂಗಡಿಯ ಪತ್ರಕರ್ತ ಯು ಎಲ್ ಉದಯ್ ಕುಮಾರ್ ಹಾಗೂ ವಿನಯ ದಂಪತಿಗಳ ಪುತ್ರನಾಗಿದ್ದು,, ಅಮನ್ ಕೆ ಎ ಪುತ್ತೂರು ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಯೋಧ ಅಬ್ದುಲ್ ಅಜೀಜ್ ಹಾಗೂ ಆರೋಗ್ಯ ಇಲಾಖಾ ಉದ್ಯೋಗಿ ಶ್ರೀಮತಿ ರಹೆಮತ್ ಬೇಗಮ್ ದಂಪತಿಗಳ ಪುತ್ರನಾಗಿದ್ದಾರೆ.
ಪ್ರೇರಣಾತ್ಮಕ ಶಿಕ್ಷಕಿ : ಇವರಿಬ್ಬರಿಗೆ ಮಾರ್ಗದರ್ಶಕ ಶಿಕ್ಷಕಿಯಾಗಿರುವ ಶ್ರೀಮತಿ ನಿಶಿತಾ ಇವರಿಗೆ ಗೂಗಲ್ ನೀಡುವ ಇನ್ಸ್ಫಯರಿಂಗ್ ಎಜುಕೇಟರ್ ಪ್ರಶಸ್ತಿ ಲಭಿಸಿದೆ.