ಕುಂದಾಪುರ, ಜು 31(Daijiworld News/MSP): ಕುಂದಾಪುರದಿಂದ ಗಂಗೊಳ್ಳಿ ಒಂದು ಹೊಳೆಯ ಆಚೆಯಿದೆ. ಅಬ್ಬಾಬ್ಬ ಎಂದರೆ 1 ಕಿ.ಮೀ.ಅಷ್ಟೇ. ಆದರೆ ಈಗ ಕುಂದಾಪುರದಿಂದ ಗಂಗೊಳ್ಳಿಗೆ ಹೋಗಬೇಕಾದರೆ ಬರೋಬ್ಬರಿ 15 ಕಿ.ಮೀ.ಸುತ್ತು ಬಳಸಿ ಹೋಗಬೇಕು. ಕುಂದಾಪುರದಿಂದ ಗಂಗೊಳ್ಳಿಗೆ ಸೇತುವೆ ನಿರ್ಮಾಣವಾದರೆ ಕೇವಲ ಒಂದೇ ಕಿ.ಮೀ.ನಲ್ಲಿ ಗಂಗೊಳ್ಳಿ ತಲುಪಬಹುದು. ಎರಡು ಪ್ರಮುಖ ಊರುಗಳ ಬೆಸೆಯುವ ಸೇತುವೆಯ ಕನಸು ಎರಡು ವರ್ಷಗಳ ಹಿಂದೆ ಗರಿಗೆದರಿದರೂ ಮತ್ತೆ ಯಾವುದೇ ಚುರುಕು ಪಡೆಯಲಿಲ್ಲ.
ಕುಂದಾಪುರ- ಗಂಗೊಳ್ಳಿ ಸೇತುವೆ ಆಗಬೇಕು ಎನ್ನುವ ಪ್ರಬಲ ಹೋರಾಟ ಪರಿಣಾಮಕಾರಿಯಾಗಿ ನಡೆದರೆ ಸರ್ಕಾರ ಮಟ್ಟದ ಗಮನ ಸೆಳೆಯುವುದು ಕಷ್ಟವೆನಲ್ಲ. ಈ ಬಗ್ಗೆ ಸಾಂಘಿಕವಾದ ಹೋರಾಟ ನಡೆಯುತ್ತಲೆ ಇದ್ದರೆ ಖಂಡಿತಾ ಕುಂದಾಪುರ -ಗಂಗೊಳ್ಳಿ ಸೇತುವೆ ಆಗಿಯೇ ಆಗುತ್ತದೆ. ಆದರೆ 2016ರಲ್ಲಿ ಚುರುಕು ಪಡೆದ ಸೇತುವೆಯ ಹೋರಾಟ ಮತ್ತೆ ಅದೇ ವೇಗದಲ್ಲಿ ಸಾಗಲಿಲ್ಲ ಎನ್ನಲಾಗುತ್ತಿದೆ.
ಗಂಗೊಳ್ಳಿ ಕೂಡಾ ಮೀನುಗಾರಿಕೆಯ ಮೂಲಕ ಬೆಳೆಯುತ್ತಿರುವ ಊರು. ಮತ್ಸ್ಯೋಧ್ಯಮಕ್ಕೆ ಎರಡು ಪ್ರಮುಖ ಊರುಗಳ ಬೆಸೆಯುವಿಕೆ ಆದರೆ ಇನ್ನಷ್ಟು ಬಲ ಬರುವ ಸಾಧ್ಯತೆ ಇದೆ. ಮೀನುಗಾರಿಕೆಯ ವೇಗವೂ ಹೆಚ್ಚಲಿದೆ. ಗಂಗೊಳ್ಳಿ ಪೇಟೆ ಕೂಡಾ ವೇಗವಾಗಿ ಬೆಳವಣಿಗೆ ಹೊಂದಲಿದೆ. ಗಂಗೊಳ್ಳಿ ಉಡುಪಿ ಜಿಲ್ಲೆಯ ಪ್ರಮುಖ ಪಟ್ಟಣ. ಅದೆಷ್ಟೋ ಜನರಿಗೆ ಇಲ್ಲಿ ಬದುಕು ಕಟ್ಟಿಕೊಳ್ಳಲು ವಿಫುಲ ಅವಕಾಶಗಳು ಮೀನುಗಾರಿಕೆಯಿಂದಾಗಿ ಸೃಷ್ಟಿಯಾಗಿದೆ. ಅಂತಹ ಗಂಗೊಳ್ಳಿಗೆ ತಾಲೂಕು ಕೇಂದ್ರದಿಂದ ಸೇತುವೆಯಾದರೆ ಬೆಳವಣಿಗೆಗೆ ಇನ್ನಷ್ಟು ಬಲ ಬರುತ್ತದೆ. ಇಲ್ಲಿ ಗಂಗೊಳ್ಳಿ ಮಾತ್ರವಲ್ಲ ಕುಂದಾಪುರವೂ ಕೂಡಾ ಇನ್ನಷ್ಟು ಅಭಿವೃದ್ಧಿಗೊಳ್ಳಲಿದೆ.
ಈಗ ಗಂಗೊಳ್ಳಿಗೆ ಹೋಗಬೇಕಾದರೆ ತಲ್ಲೂರು, ಹೆಮ್ಮಾಡಿ, ತ್ರಾಸಿಯ ಮೂಲಕವೇ ಹೋಗಬೇಕು. ಹೆಚ್ಚು ಕಡಿಮೆ ೧೫ ಕಿಲೋ ಮೀಟರ್ಗಳು. ಅದೇ ಕುಂದಾಪುರದಿಂದ ಗಂಗೊಳ್ಳಿಗೆ ಸೇತುವೆ ಆದರೆ ಬರೇ 1 ಕಿ.ಮೀ. ಅಷ್ಟೇ. ಕುಂದಾಪುರದಲ್ಲಿ ಈಗ ರಿಂಗ್ ರೋಡ್ ಆಗಿರುವುದರಿಂದ ಸೇತುವೆ ಯೋಜನೆ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.
ಕುಂದಾಪುರ-ಗಂಗೊಳ್ಳಿ ಸೇತುವೆ ಆದರೆ ಪ್ರಯೋಜನಗಳು ಹಲವಾರು. ಕೂಗಳತೆಯ ದೂರದಲ್ಲಿರುವ ಊರಿಗೆ ತಕ್ಷಣ ಹೋಗಿ ಬರುವ ಅವಕಾಶ ಸೃಷ್ಟಿಯಾಗುತ್ತದೆ. ಇದರಿಂದ ಹೆದ್ದಾರಿಯಲ್ಲಿ ವಾಹನ ದಟ್ಟಣಿಯೂ ತಗ್ಗುತ್ತದೆ. ಕುಂದಾಪುರ-ಗಂಗೊಳ್ಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಹೋಗುತ್ತವೆ. ಮೀನು ಸಾಗಾಟ ಪ್ರಮುಖವಾಗಿದ್ದು, ಇಲ್ಲಿ ಸೇತುವೆಯಾದರೆ ಹೆದ್ದಾರಿಯ ಒತ್ತಡ ಕಡಿಮೆಯಾಗಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಎರಡು ಊರುಗಳಿಗೆ ಕೆಲಸ ಕಾರ್ಯಕ್ಕೆ ಹೋಗುವ ಜನರಿಗೆ ಇನ್ನಷ್ಟು ಅನುಕೂಲವಾಗುತ್ತದೆ.
ಕುಂದಾಪುರ-ಗಂಗೊಳ್ಳಿ ಸೇತುವೆ ಅಸಾಧ್ಯದ ವಿಚಾರವಂತೂ ಅಲ್ಲ. ಹಲವಾರು ವರ್ಷಗಳ ಹಿಂದೆ ಹೀಗೊಂದು ಪರಿಕಲ್ಪನೆ ಜನರ ಮನಸ್ಸಿನಲ್ಲಿ ಮೂಡಿತ್ತು. ಆಗ ಕೋಡಿಯ ಸೇತುವೆಯೇ ಪ್ರಮುಖವಾಗಿತ್ತು. ಈಗ ಕೋಡಿಯ ಸೇತುವೆ ಆಗಿದೆ. ಕುಂದಾಪುರ-ಗಂಗೊಳ್ಳಿಯ ಸೇತುವೆ ಜೀವ ಪಡೆದುಕೊಂಡಿದೆ.
ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಬಹುತೇಕ ಅವಶ್ಯ ಸೇತುವೆಗಳು ಈಗಾಗಲೇ ಆಗಿವೆ, ಕೆಲವು ಮುಖ್ಯ ಬೇಡಿಕೆಯ ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಈ ನಡುವೆ ಈಗ ಗಂಗೊಳ್ಳಿ-ಕುಂದಾಪುರ ಬೆಸೆಯುವ ಸೇತುವೆಯಾದರೆ ಅದರ ಪ್ರಯೋಜನ ಸಾಕಷ್ಟಿದೆ.