ಮಂಗಳೂರು, ಜು 31 (DaijiworldNews/SM): ಬೊಂದೇಲ್ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಆಗಸ್ಟ್ 10ರಂದು ನಡೆಯಲಿದ್ದು, ಆಗಸ್ಟ್ 1ರಿಂದ ನೊವೆನಾ ಪ್ರಾರ್ಥನೆಗಳು ಆರಂಭವಾಗಲಿದೆ. ಈ ಪ್ರಯುಕ್ತ ಬುಧವಾರದಂದು ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ.ಆರ್. ಲೋಬೊ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ನಗರದ ಮೇರಿಹಿಲ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ನಿಂದ ಹೊರೆಕಾಣಿಕಾ ಮೆರವಣಿಗೆ ಸಾಗಿ ಬಂದು ಬೋಂದೆಲ್ ಕ್ಷೇತ್ರದಲ್ಲಿ ಸಮಾಪ್ತಿಗೊಂಡಿತು. ಈ ವೇಳೆ ಮಾತನಾಡಿದ ಅವರು ಈ ಕ್ಷೇತ್ರದಲ್ಲಿ ನಡೆಯುವ ಸಂಭ್ರಮ ಕೇವಲ ಒಂದು ಧರ್ಮದ ಹಬ್ಬವಾಗಿರದೆ ನಾಡಿನ ಸಮಸ್ತ ಭಾಂದವರ ಹಬ್ಬವಾಗಿದೆ ಇದು ಶಾಂತಿ ಸೌಹಾರ್ದತೆಯನ್ನು ಸಾರಿ ಒಂದು ಕೊಂಡಿಯಾಗಿದೆ ಎಂದವರು ಹೇಳಿದರು.
ಈ ವೇಳೆ ಚರ್ಚ್ ನ ಧರ್ಮಗುರುಗಳಾದ ಫಾ. ಆ್ಯಂಡ್ರು ಲಿಯೊ ಡಿಸೋಜ, ಸಹಾಯಕ ಧರ್ಮಗುರುಗಳಾದ ಫಾ. ಸಿರಿಲ್, ಸಂತ ಲಾರೆನ್ಸ್ ಶಾಲಾ ಪ್ರಾಂಶುಪಾಲರಾದ ಫಾ. ಕ್ಲಿಫರ್ಡ್ ಪಿಂಟೊ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಹೆನ್ಬರ್ಟ್ ಪಿಂಟೊ, ಚರ್ಚ್ ಪಾಲನ ಮಂಡಳಿಯ ಕಾರ್ಯದರ್ಶಿ ಫ್ರಾನ್ಸಿಸ್ ವೇಗಸ್, ಪುಣ್ಯ ಕ್ಷೇತ್ರ ಪ್ರಚಾರ ಸಮಿತಿ ಮುಖ್ಯಸ್ಥ ಸ್ಟ್ಯಾನಿ ಆಲ್ವಾರಿಸ್ ಮತ್ತಿತರರು ಉಪಸ್ಥಿತರಿದ್ದರು.