ಬೆಂಗಳೂರು, ಡಿ 18: ತುಳುನಾಡಿನ ಜಾನಪದ ಕ್ರೀಡೆ ಕಂಬಳ ಪೌರುಷ ಸಂಕೇತದ ಕ್ರೀಡೆ. ಕಂಬಳಕ್ಕೆ ನ್ಯಾಯ ಸಿಗುವವರೆಗೂ ಹೋರಾಟವನ್ನು ನಿಲ್ಲಿಸಬೇಡಿ ಎಂದು ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.
ತುಳುಕೂಟ ಬೆಂಗಳೂರು ನಗರದಲ್ಲಿ ಆಯೋಜಿಸಿದ್ದ ತುಳುನಾಡ ಉತ್ಸವ ಮತ್ತು ತುಳು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕಂಬಳಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಬೇಕೆನ್ನುವ ಬೇಡಿಕೆ ನ್ಯಾಯಸಮ್ಮತವಾಗಿದೆ. ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸಬೇಡಿ ಎಂದು ಕಂಬಳ ತುಳುನಾಡಿನ ಜನತೆಗೆ ಹುರಿದುಂಬಿಸಿದರು.
2019ರ ಚುನಾವಣೆ ಹತ್ತಿರ ಬರುತ್ತಿದೆ. ಯಾವುದೇ ಸರ್ಕಾರಗಳು ಇರಲಿ ಅಥವಾ ಸರ್ಕಾರಗಳು ಬದಲಾಗಲಿ. ಇದು ನಿಮಗೆ ಒಳ್ಳೆಯ ಅವಕಾಶ. ಇದನ್ನು ಕಳೆದುಕೊಳ್ಳಬೇಡಿ. ರಾಜಕಾರಣಿಗಳು ನಿಮ್ಮ ಬೇಡಿಕೆಗೆ ಈಗ ಹೆಚ್ಚು ಸ್ಪಂದಿಸುತ್ತಾರೆ. ನಿಮ್ಮ ಬೇಡಿಕೆಯನ್ನೂ ಈಡೇರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಯಾರಿಗೆ ತಾಕತ್ತು ಇದೆಯೋ ಅವರು ಕಂಬಳ ಕ್ರೀಡೆ ಆಡುತ್ತಾರೆ. ಒಬ್ಬ ಮನುಷ್ಯನೇ ಕೋಣಗಳ ಜತೆಗೆ 400 ಮೀಟರ್, 800 ಮೀಟರ್, ಒಂದು ಕಿಲೋ ಮೀಟರ್ ದೂರದ ಸ್ಪರ್ಧೆಯಲ್ಲಿ ಓಡುತ್ತಾನೆ ಎಂದ ಮೇಲೆ, ಅದು ಪ್ರಾಣಿಹಿಂಸೆ, ಪಶುಗಳ ಮೇಲಿನ ದೌರ್ಜನ್ಯ ಆಗಲು ಖಂಡಿತ ಸಾಧ್ಯವಿಲ್ಲ. ಕಂಬಳ ಅಪ್ಪಟ ಜಾನಪದ ಕ್ರೀಡೆ. ಇದರಿಂದ ಪಶುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಬದಲಿಗೆ ಅವುಗಳ ಶಕ್ತಿಯೂ ವರ್ಧಿಸುತ್ತದೆ ಎಂದರು.