ಪುತ್ತೂರು,ಆ 1 (Daijiworld News/MSP): 28 ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವವಿವಾಹಿತೆಯೊಬ್ಬರು ಆನಾರೋಗ್ಯದಿಂದ ಬಳಲಿ, ಆಸ್ಪತ್ರೆಗೆ ದಾಖಲಾಗಿ ಬಳಿಕ ಅಲ್ಲಿಂದ ನಾಪತ್ತೆಯಾಗಿರುವ ಬಗ್ಗೆ ಆಕೆಯ ಪತಿ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿರುವ ಘಟನೆ ನಡೆದಿದೆ. ನಾಪತ್ತೆಯಾದವರನ್ನು ಕೇರಳದ ಕಣ್ಣೂರಿನ ನಿವಾಸಿ ಶಿನೋಜ್ ಅವರ ಪತ್ನಿ ಪ್ರೇಮಾ ಅಲಿಯಾಸ್ ಪಿಂಕಿ(18) ಎಂದು ಗುರುತಿಸಲಾಗಿದೆ.
ಸೋಮವಾರಪೇಟೆಯ ಕುಶಾಲನಗರದ ನಿವಾಸಿಯಾಗಿದ್ದ ಈಕೆಯ ಅಂತರ್ಜಾತಿ ವಿವಾಹವು ಜು.8 ರಂದು ಶಿನೋಜ್ ಜತೆ ಕುಶಾಲನಗರದಲ್ಲಿ ನಡೆದಿತ್ತು. ಬಳಿಕ ಜು.26 ರಂದು ಶಿನೋಜ್ ದಂಪತಿ ಪುತ್ತೂರಿನ ಹಾರಾಡಿಯಲ್ಲಿರುವ ಆತನ ಅಕ್ಕನ ಮನೆಗೆ ಆಗಮಿಸಿದ್ದರು. ಜು.29 ರಂದು ಪ್ರೇಮಾಳಿಗೆ ಜ್ವರ ಕಾಣಿಸಿಕೊಂಡಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರೇಮಾ ಅವರನ್ನು ಆಸ್ಪತ್ರೆಯ ಮಹಿಳಾ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಪತಿ ಶಿನೋಜ್ ಆಸ್ಪತ್ರೆಯ ಹಾಲ್ ನಲ್ಲಿ ಮಲಗಿದ್ದರು. ಬೆಳಗ್ಗೆ ಪತ್ನಿಯನ್ನು ನೋಡಲೆಂದು ಮಹಿಳಾ ಕೊಠಡಿಗೆ ಹೋದ ವೇಳೆ ಪ್ರೇಮಾ ನಾಪತ್ತೆಯಾಗಿದ್ದರು. ಇದೇ ಸಂದರ್ಭ ಪತ್ನಿ ಪ್ರೇಮಾ, " ನಾನು ನನ್ನ ಪ್ರಿಯತಮನೊಂದಿಗೆ ಹೋಗಿದ್ದೇನೆ, ನನ್ನನ್ನು ಹುಡುಕಬೇಡಿ" ಎಂದು ಸಂದೇಶ ಕಳುಹಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಶಾಲನಗರದ ತಾಯಿ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಪ್ರೇಮಾ ಅಲ್ಲಿಗೂ ಹೋಗಿಲ್ಲ ಎಂದು ತಿಳಿದುಬಂದಿದೆ.