ಮಂಗಳೂರು ಡಿ 18: ಗುಜರಾತ್ ಚುನಾವಣೆಯ ಫಲಿತಾಂಶ ನಿಜಕ್ಕೂ ಬಿಜೆಪಿಗೆ ಪಾಠವಾಗಲಿದೆ.ಗುಜರಾತ್ ನಲ್ಲಿ ಬಿಜೆಪಿ ಚುನಾವಣೆಯನ್ನು ಗೆದ್ದಿದ್ದರೂ ಬಿಜೆಪಿ ನಿಜವಾಗಿಯೂ ಹಿಂದುಳಿದಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಟೀಕಿಸಿದ್ದಾರೆ.
ಡಿಸೆಂಬರ್ 18 ರ, ಶುಕ್ರವಾರ ನಗರದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಯು.ಟಿ.ಖಾದರ್, ಕಳೆದ 22 ವರ್ಷಗಳಿಂದ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮೋದಿಯ ತವರು ನೆಲ, ಹಲವಾರು ರ್ಯಾಲಿ, ಎಲ್ಲೆಡೆ ಪ್ರಚಾರದ ಸಮಾವೇಶಗಳನ್ನು ಮಾಡಿದರೂ ಕೂಡಾ ಕಾಂಗ್ರೆಸ್ ಬಿಜೆಪಿಗೆ ಬಲಾಬಲಾದ ಸ್ವರ್ಧೆ ನೀಡಿದೆ. ಕೇಂದ್ರದ ಜನಸ್ನೇಹಿಯಲ್ಲದ ಯೋಜನೆಗಳಿಂದ ದೇಶದ ಜನರು ಸಂಕಷ್ಟಕ್ಕೀಡಾಗಿದ್ದಾರೆ ಮತ್ತು ಇದರ ಪರಿಣಾಮವೇ ಗುಜರಾತ್ ಫಲಿತಾಂಶ. ಕೇಂದ್ರದ ಎಲ್ಲಾ ನೀತಿಗಳನ್ನು ಮತದಾರರು ಒಪ್ಪಿಕೊಳ್ಳುವುದಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ದೇಶದ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು ಕಾಂಗ್ರೆಸ್ ಪರ ರಾಜಕೀಯ ಬದಲಾವಣೆಗಳನ್ನು ನಾವು ನೇರವಾಗಿ ಕಾಣಬಹುದಾಗಿದೆ ಎಂದರು. ಅಲ್ಲದೆ ಮೋದಿಯ ಸಿನಿಮಾ ಶೈಲಿಯ ಪ್ರಚಾರವು ಚುನಾವಣೆಯಲ್ಲಿ ಜನರ ವಿಶ್ವಾಸವನ್ನು ಗಳಿಸುವುದಿಲ್ಲ ಎನ್ನುವುದು ಇಲ್ಲೇ ಸಾಬೀತಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ. ರಾಹುಲ್ ಗಾಂಧಿಯ ಬಗ್ಗೆ ವಿರೋಧಿಗಳು ಎಷ್ಟೇ ಟೀಕೆ ಮಾಡಿದರೂ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದರೂ, ದೇಶದ ಮುಂದಿನ ಪ್ರಧಾನಿ ರಾಹುಲ್ ಗಾಂಧಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.