ಕಾಸರಗೋಡು, ಆ 1 (Daijiworld News/RD): ನಗರದ ನೀರ್ಚಾಲು ಪೇಟೆಯ ಸಮೀಪ ಸರಣಿ ಅಂಗಡಿಗಳ ಮೇಲೆ ಕಳ್ಳತನ ನಡೆದಿದೆ. ಬುಧವಾರ ರಾತ್ರಿ ಈ ಘಟನೆ ನಡೆದಿದೆ.
ಅಂಗಡಿ ಮಾಲೀಕರು ವ್ಯಾಪಾರ ವಹಿವಾಟು ಮುಗಿಸಿದ ಬಳಿಕ ಮನೆಗೆ ತೆರಳಿದ ಸಂದರ್ಭದಲ್ಲಿ ಐದಕ್ಕೂ ಅಧಿಕ ಅಂಗಡಿಗಳ ಮೇಲೆ ನುಗ್ಗಿದ ಕಳ್ಳರು, ಸಾವಿರಾರು ರೂ ಮೌಲ್ಯದ ಸಾಮಗ್ರಿ ಹಾಗೂ ನಗದನ್ನು ಕಳವು ಮಾಡಿದ್ದಾರೆ.
ಅಂಗಡಿ ಮಾಲೀಕ ಮುಂಜಾನೆ ಅಂಗಡಿಯ ಬಾಗಿಲು ತೆರೆಯಲು ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಈಗಾಗಲೇ ಬದಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ. ವರ್ಷದ ಹಿಂದೆಯೂ ಇದೇ ರೀತಿ ಸರಣಿ ಕಳ್ಳತನ ನಡೆದಿದ್ದು. ಆದರೆ ಆರೋಪಿಗಳನ್ನು ಇನ್ನೂ ಪೊಲೀಸರಿಗೆ ಬಂಧಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.