ಮಂಗಳೂರು, ಆ1 (Daijiworld News/RD): ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಯುವಕ ಸಾವನ್ನಪ್ಪಿದ್ದ ಘಟನೆ ಆಗಸ್ಟ್ 1 ಗುರುವಾರ ನಡೆದಿದೆ. ಹಲವು ದಿನಗಳ ಹಿಂದೆ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಡೆಂಗ್ಯೂ ಜ್ವರಕ್ಕೆ ಮೃತಪಟ್ಟವರು ಸಂಖ್ಯೆ ಆರಕ್ಕೆ ಏರಿಕೆಯಾಗಿದ್ದು, ಮೃತ ವ್ಯಕ್ತಿ 25 ವರ್ಷದ ಕಾರ್ತಿಕ್ ಆಗಿದ್ದು, ನಗರದ ಬೋಳಾರ ಮುಳಿಹಿತ್ಲು ಟೈಲರಿರೋಡ್ ನಿವಾಸಿ ಎಂದು ಗುರುತಿಸಲಾಗಿದೆ. ಇವರು ದ.ಕ. ಉಡುಪಿ ಮೀನು ಮರಾಟ ಸಹಕಾರಿ ಸಂಘದ ಡೀಸೆಲ್ ಬಂಕ್ನಲ್ಲಿ ಉದ್ಯೋಗಿಯಾಗಿರುತ್ತಾರೆ.
ಕಾರ್ತಿಕ್ ನ ಸಾವಿಗೆ ಡೆಂಗ್ಯೂ ಕಾರಣವೇ ಎಂಬ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ವರದಿ ಬಂದ ಬಳಿಕ ಈ ಬಗ್ಗೆ ಸ್ಷಷ್ಟಪಡಿಸುತ್ತೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ತಿಳಿಸಿದ್ದಾರೆ.
ಕಾರ್ತಿಕ್ ಸಹಿತ ಶಂಕಿತ ಡೆಂಗ್ಯೂ ಜ್ವರವು ತಿಂಗಳ ಅವಧಿಯಲ್ಲಿ ಈಗಾಗಲೇ ಆರು ಮಂದಿಯನ್ನು ಬಲಿತೆಗೆದುಕೊಂಡಿದೆ. ಪತ್ರಕರ್ತ ನಾಗೇಶ್ ಪಡು, ವಿದ್ಯಾರ್ಥಿನಿ ಶ್ರದ್ಧಾ, ಕಡಬದ ವೀಣಾ, ನಾಯಕ್ ಅವರ ಸಾವಿಗೆ ಈ ಡೆಂಗ್ಯೂ ಜ್ವರ ಕಾರಣ ಎಂದು ವೈದ್ಯರು ದೃಢಪಡಿಸಿದ್ದು, ಬಾಲಕೃಷ್ಣಮತ್ತು ಕಡಬದ ಶ್ರೀಧರ್ ಗೌಡ ಅವರ ಸಾವಿಗೆ ಡೆಂಗ್ಯೂ ಕಾರಣ ಎಂಬುವುದು ಆರೋಗ್ಯ ಇಲಾಖೆ ದೃಢಪಡಿಸಿಲ್ಲ.
ನಗರದ ಆರೋಗ್ಯ ಇಲಾಖೆ ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದು, ಜಿಲ್ಲೆಯಲ್ಲಿ ಈವರೆಗೆ 581 ಮಂದಿ ಚಿಕಿತ್ಸೆ ಪಡೆದಿದ್ದು, 280 ಮಂದಿ ಗುಣಮುಖರಾಗಿದ್ದಾರೆ. ಇನ್ನೂ170 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಜೊತೆಗೆ ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಅಭಿಯಾನ ಹಾಗೂ ಹಲವಾರು ಕ್ರಮಗಳನ್ನು ಕೈಗೊಂಡಿದೆ.