ಮಂಗಳೂರು, ಆ 01 (DaijiworldNews/SM): ಕೆಲವೇ ತಿಂಗಳ ಕಾಲ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರನ್ನು ವರ್ಗಾವಣೆ ಮಾಡಲಾಗಿದೆ. ನೂತನ ಪೊಲೀಸ್ ಕಮಿಷನರ್ ಆಗಿ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎ ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ನೇಮಕ ಮಾಡಲಾಗಿದೆ.
ಎ ಸುಬ್ರಹ್ಮಣ್ಯೇಶ್ವರ ರಾವ್ ಸಂದೀಪ್ ಪಾಟೀಲ್
ಸಂದೀಪ್ ಪಾಟೀಲ್ ಅವರನ್ನು ಡಿಐಜಿ ಮತ್ತು ಬೆಂಗಳೂರು ನಗರ ಅಪರಾಧ ಇಲಾಖೆಯ ಜಂಟಿ ಆಯುಕ್ತರಾಗಿ ತಕ್ಷಣದಿಂದಲೇ ಅಧಿಕಾರಕ್ಕೆ ಬರುವಂತೆ ನಿಯೋಜಿಸಲಾಗಿದೆ. ಸುಬ್ರಹ್ಮಣ್ಯೇಶ್ವರ ರಾವ್ ಅವರು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿದ್ದರು. ಬಳಿಕ ಮೈಸೂರು ಕಮಿಷರನ್ ಆದರು. ಮತ್ತೆ ಬೆಂಗಳೂರು ಇಂಟೆಲಿಜನ್ಸ್ ಡಿಐಜಿಯಾಗಿ ಆಗಿ ಇದೀಗ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನಿಯುಕ್ತಿಗೊಂಡಿದ್ದಾರೆ.
ಸಂದೀಪ್ ಪಾಟೀಲ್ ಅವರು ಕೆಲವೇ ತಿಂಗಳ ಸೇವಾ ಅವಧಿಯಲ್ಲಿ ದಕ್ಷ ಅಧಿಕಾರಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದರು. ಅಕ್ರಮ ಗೋಸಾಗಾಣಿಕೆ, ಗಾಂಜಾ ಮಾರಾಟಗಾರರಿಗೆ ಕಡಿವಾಣ ಹಾಕಿದ್ದರು. ರೌಡಿಶೀಟರ್ಗಳ ಹೆಡೆಮುರಿ ಕಟ್ಟಲು ಶೂಟೌಟ್ ಆದೇಶವನ್ನೂ ನೀಡಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರ ದೂರು ದುಮ್ಮಾನಗಳನ್ನು ಆಲಿಸುತ್ತಿದ್ದ ಸಂದೀಪ್ ಪಾಟೀಲ್ ಪೊಲೀಸ್ ಫೋನ್ ಇನ್ ಕಾರ್ಯಕ್ರಮದ ಮೂಲಕವೂ ಜನಪ್ರಿಯರಾಗಿದ್ದರು.