ಮಂಗಳೂರು, ಆ.02(Daijiworld News/SS): ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ ಮಂಗಳೂರು, ರಜಕ ಯೂತ್ಸ್ ಮಂಗಳೂರು ಹಾಗೂ ತಾಲೂಕು ಸಂಘಗಳ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಸ್ತ ಮಡಿವಾಳ ಬಾಂಧವರಿಗಾಗಿ ಆಗಸ್ಟ್ 11ರಂದು ‘ಆಟಿಡ್ ಕಂಡೊಡೊಂಜಿ ದಿನ 2019’ ಕಾರ್ಯಕ್ರಮವನ್ನು ಮಂಗಳೂರು ತಾಲೂಕಿನ ಸೂರಿಂಜೆಯಲ್ಲಿ ಆಯೋಜಿಸಲಾಗಿದೆ.
ಸೂರಿಂಜೆ ಕುಲ್ಲಂಗಾಲು ರಮೇಶ್ ಕುಮಾರ್ ಮುಂಬಯಿ ಅವರ ಗದ್ದೆಯಲ್ಲಿ ಬೆಳಗ್ಗೆ 9.30ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕೆಸರುಗದ್ದೆಯಲ್ಲಿ ಮಕ್ಕಳಿಗೆ ಓಟ, ಪಾಸಿಂಗ್ ಬಾಲ್, ಯುವಕರಿಗೆ - ಪುರುಷರಿಗೆ ಓಟ, ಹಗ್ಗ ಜಗ್ಗಾಟ, ಕಬಡ್ಡಿ, ವಾಲಿಬಾಲ್, ಯುವತಿಯರು - ಮಹಿಳೆಯರಿಗೆ ಓಟ, ತ್ರೋಬಾಲ್, ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಚೆನ್ನಮಣೆ ಆಟ, ನಿಧಿ ಶೋಧ, ತೆಂಗಿನಕಾಯಿ ಕುಟ್ಟುವ ಸ್ಪರ್ಧೆ, ಕೋಳಿ ಅದೃಷ್ಟ ಚೀಟಿ ಹಾಗೂ ಹರಾಜು ವಿಶೇಷ ಆಕರ್ಷಣೆಯಾಗಿದೆ ಎಂದು ಸಂಘದ ಪ್ರಕಟನೆ ತಿಳಿಸಿದೆ.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಸ್ಮರಣಿಕೆ ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಆಯ್ದ ಸಮಾಜದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಧನಸಹಾಯ ವಿತರಿಸಲಾಗುವುದು. ಆಟಿ ತಿಂಗಳ ವೈವಿಧ್ಯಮಯ ತಿಂಡಿ ತಿನಿಸುಗಳೊಂದಿಗೆ ಭೋಜನಕೂಟ ಜರಗಲಿದೆ ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ.
‘ಮದರಂಗಿ ಮಹತ್ವ’ ಕುರಿತು ಪ್ರಬಂಧ ಸ್ಪರ್ಧೆಯನ್ನು ಸ್ವಜಾತಿ ಬಾಂಧವರಿಗೆ ಆಯೋಜಿಸಲಾಗಿದೆ. ಮದರಂಗಿ ತಯಾರಿ, ಪ್ರಾಚೀನ ಕಾಲದಲ್ಲಿದ್ದ ರೀತಿ, ಆಧುನಿಕ ಬದಲಾವಣೆಗಳು, ಆರೋಗ್ಯ ಕ್ಷೇತ್ರದಲ್ಲಿ ಬಳುವಳಿ, ಸಂಪ್ರದಾಯ, ಉಪಯೋಗ ಮುಂತಾದ ಅಂಶಗಳನ್ನು ಒಳಗೊಂಡ ಪ್ರಬಂಧವನ್ನು ಆಗಸ್ಟ್ 4ರೊಳಗೆ ಕಾರ್ಯದರ್ಶಿ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ, ಸಂದೇಶ್ ಎಲೆಕ್ಟಿಕಲ್ಸ್, 2ನೇ ಮಹಡಿ ಆರೋಜ ಬಿಲ್ಡಿಂಗ್, ವಿವಿ ಕಾಲೇಜು ಮುಂಭಾಗ ಹಂಪನಕಟ್ಟೆ ವಿಳಾಸಕ್ಕೆ ಕಳುಹಿಸಬೇಕು ಎಂದು ಸಂಘದ ಪ್ರಕಟನೆ ತಿಳಿಸಿದೆ.