ಪುತ್ತೂರು, ಆ.02(Daijiworld News/SS): ಇಲ್ಲಿನ ಬಜತ್ತೂರು ಗ್ರಾಮದ ಗಾಣದಮೂಲೆ ಎಂಬಲ್ಲಿರುವ ಸರಕಾರಿ ರುದ್ರ ಭೂಮಿಯ ಪಾಡಿಯಲ್ಲಿ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಅಂಕದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ವರದಿಯಾಗಿದೆ.
ಬಂಧಿತರನ್ನು ಶೀನಪ್ಪಗೌಡ, ಬಾಬು ಸಪಲ್ಯ, ನಿತೀನ್ ಕುಮಾರ್, ಸೇಸಪ್ಪ ಮತ್ತು ನಾಗೇಶ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ ಇಬ್ಬರು ಆರೋಪಿಗಳು ಓಡಿ ಪರಾರಿಯಾಗಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ್ದು, ಆರೋಪಿಗಳಿಂದ ಒಟ್ಟು ರೂ. 840/- ನಗದು, 10 ಕೋಳಿ ಮತ್ತು ಸ್ಥಳದಲ್ಲಿದ್ದ 2 ಮೋಟಾರು ಸೈಕಲ್'ಗಳನ್ನು ವಶಪಡಿಸಿದ್ದಾರೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.