ಯಾದಗಿರಿ, ಡಿ 18: ಕಾಂಗ್ರೆಸ್ ಪಕ್ಷಕ್ಕೆ ಹಿಂದಿನ ಚುನಾವಣೆಗಿಂತ ಹೆಚ್ಚಿನ ಸ್ಥಾನ ಬಂದಿರುವುದು ರಾಹುಲ್ ನಾಯಕತ್ವಕ್ಕೆ ದೊರೆತ ಬೆಂಬಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುಜರಾತ್ನಲ್ಲಿ ಗೆದ್ದು ಸೋತಿದ್ದೇವೆ. ರಾಹುಲ್ ಗಾಂಧಿಯವರನ್ನು ಯುವನಾಯಕ ಎಂದು ಜನತೆ ಒಪ್ಪಿದ್ದಾರೆ. ಆದರೂ ಹೇಳುವಂತಿಲ್ಲ. ಅಧಿಕಾರ ಮತ್ತು ದುಡ್ಡು ಬಿಜೆಪಿಯ ಗೆಲುವಿಗೆ ಕಾರಣವಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಪೈಪೋಟಿ ನೀಡಿದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್ ಟಿ ಸ್ವಲ್ಪ ಮಟ್ಟಿಗೆ ಬಿಜೆಪಿಗೆ ಬಿಸಿ ಮುಟ್ಟಿಸಿದೆ ಎಂದು ಹೇಳಿದರು.
ಗುಜರಾತ್ ಕಾಂಗ್ರೆಸ್ನಲ್ಲಿ ಪ್ರಾದೇಶಿಕ ಮಟ್ಟದ ನಾಯಕರ ಅವಶ್ಯಕತೆಯಿದೆ. ಸಿಬಿಐ ದುರ್ಬಳಕೆ, ಐಟಿ ದಾಳಿ ಮೂಲಕ ಭಯ ಬೀಳಿಸುವ ಯತ್ನ ನಡೆಯುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಹಿನ್ನೆಡೆಗೆ ಕಾರಣವಾಗಿದೆ. ಗುಜರಾತ್ ಫಲಿತಾಂಶ ರಾಜ್ಯದಲ್ಲಿ ಪ್ರಭಾವ ಬೀರುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ರಾಹುಲ್ ಗೆ ಕೊಡುಗೆ ನೀಡುತ್ತೇವೆ. ಈಗ ದೇಶದಲ್ಲಿ ಪ್ರಧಾನಿ ಮೋದಿ ಅಲೆ ಕಡಿಮೆಯಾಗುತ್ತಿರುವುದಕ್ಕೆ ಈ ಚುನಾವಣೆಯ ಫಲಿತಾಂಶ ನಿದರ್ಶನವಾಗಿದೆ ಎಂದರು.