ಮಂಗಳೂರು, ಡಿ 18: ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿ ಮುಂದೆ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದ್ದು ಇವರ ಸಂಭ್ರಮ ಮುಗಿಲು ಮುಟ್ಟಿತ್ತು. ನಾಸಿಕ್ ಬ್ಯಾಂಡ್ ಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದ ಬಿಜೆಪಿ ಕಾರ್ಯಕರ್ತರು, ಸಿಹಿ ಹಂಚಿ ಸಂಭ್ರಮಿಸಿದರು. ಇದೇ ವೇಳೆ ಮಾದ್ಯಮವನ್ನು ಉದ್ದೇಶಿಸಿ ಮಾತನಾಡಿದ ಸಂಸದ ನಳೀನ್ ಕುಮಾರ್ ಕಟೀಲು ಗುಜರಾತ್ ಚುನಾವಣೆಯ ಫಲಿತಾಂಶ ಈ ದೇಶದಲ್ಲಿ ಮೋದಿ ಮೋಡಿಯ ಅಲೆ ಇರುವುದು ಸಾರಿ ಹೇಳುತ್ತಿದೆ. ಮುಂದೆ ದೇಶದಲ್ಲಿ ಬಿಜೆಪಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ತನ್ನ ದಿಗ್ವಿಜಯ ಯಾತ್ರೆ ಮುಂದುವರಿಸಲಿದೆ ಎಂದರು. ಅಲ್ಲದೆ ಈಹಿಂದೆ ಚುನಾವಣಾಯ ಪೂರ್ವ ನೀಡಿದ ವಿಶ್ಲೇಷಕರ ಸಮೀಕ್ಷಾ ವರದಿ ತಪ್ಪಾಗಿದೆ. ಮುಂದೆ ಕರ್ನಾಟಕದಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಪಕ್ಷದ ಮುಖಂಡರಾದ ವೇದವ್ಯಾಸ್ ಕಾಮತ್, ಬದ್ರಿನಾಥ್, ಸತೀಸ್ ಪ್ರಭು , ಕಾರ್ಪೋರೇಟರ್ ಪೂರ್ಣಿಮ , ರೂಪಾ ಡಿ ಬಂಗೇರಾ, ಸಂಜೀವ್ ಮಠಂದೂರು, ಮೀನಾಕ್ಷಿ ಸತೀಸ್ ಮುಂತಾದವರು ಉಪಸ್ಥಿತರಿದ್ದರು.














