ಚಾರ್ಮಾಡಿ, ಜು 02 (Daijiworld News/MSP): ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಸುಮಾರು 60 ಅಡಿ ಕಂದಕಕ್ಕೆ ಉರುಳಿದ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯ ಎರಡನೇ ತಿರುವಿನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಲಾರಿಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.
ಬಳ್ಳಾರಿಯಿಂದ ಧರ್ಮಸ್ಥಳ ಕಡೆಗೆ ಕುರಿ ಗೊಬ್ಬರ ಸಾಗಿಸುತ್ತಿದ್ದ ಲಾರಿ ಚಾರ್ಮಾಡಿಯಿಂದ ಕೊಟ್ಟಿಗೆ ಹಾರಕ್ಕೆ ಹೋಗುವ ಘಾಟ್ ರಸ್ತೆಯ ಎರಡನೇ ತಿರುವಿನಲ್ಲಿ ಬ್ರೇಕ್ ವೈಫಲ್ಯಕ್ಕೀಡಾಗಿ ಈ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿಉರುಳಿದ ಲಾರಿ ಸುಮಾರು 60 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ.
ಘಟನೆಯಲ್ಲಿ ಲಾರಿ ಚಾಲಕ ಹ್ಯಾರಿಸ್ ಹಾಗೂ ಕ್ಲೀನರ್ ಗಾಯಗೊಂಡಿದ್ದು, ಜೀವಪಾಯದಿಂದ ಪಾರಾಗಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.