ಕುಂದಾಪುರ, ಆ 2(Daijiworld News/RD): ಕುಂದಾಪುರ ತಾಲೂಕು ಹೊಸಾಡು ಮುಳ್ಳಿಕಟ್ಟೆಯ ನಿವಾಸಿ 62 ವರ್ಷ ಪ್ರಾಯದ ಕಾರ್ಮಿನ್ ಲೂವಿಸ್ ಅಪರೂಪದ ಸೇವಾಕಾರ್ಯದುರಂಧರೆ. ಶುಭದ ಮನೆಯಿರಲಿ, ಸೂತಕದ ಮನೆಯಿರಲಿ ಅಲ್ಲಿ ಇವರ ಉಪಸ್ಥಿತಿ ಇದ್ದೇ ಇರುತ್ತದೆ. ಯಾವುದೇ ಧರ್ಮದ ಧಾರ್ಮಿಕ ಕಾರ್ಯಕ್ರಮ ಇರಲಿ, ಸಾಮಾಜಿಕ ಕಾರ್ಯಕ್ರಮ ಇರಲಿ ಅಲ್ಲಿ ಇವರು ಸ್ವಯಂಸೇವಕಿ.
ಕಾರ್ಮಿನ್ ಲೂಯಿಸ್ ಸಂಘಜೀವಿ. ಅಂದರೆ ಅವರ ಒಂದು ವಿಶೇಷತೆ ಈ ಸಂಘದಲ್ಲಿಯೇ ಅಡಗಿದೆ. 62 ರ ಉತ್ಸಾಹಿ ಕಾರ್ಮಿನ್ ಲೂಯಿಸ್ ಈಗ ಐದು ವಿವಿಧ ಸ್ವಸಹಾಯ ಸಂಘಗಳಲ್ಲಿ ಸಕ್ರಿಯರಾಗಿದ್ದಾರೆ. ಶ್ರೀ ಕ್ಷೇ.ಧ.ಗ್ರಾ.ಯೋಜನೆ, ಸ್ತ್ರೀಶಕ್ತಿ ಗುಂಪು, ನವೋದಯ ಸ್ವಸಹಾಯ ಗುಂಪು, ಶ್ರೀ ಸಾಯಿ ಮಹಿಳಾ ಸಂಘ, ಸಂಪದದ ದಿವ್ಯಾ ಮಹಿಳಾ ಸ್ವ-ಸಹಾಯ ಸಂಘಗಳ ಸಕ್ರಿಯ ಸದಸ್ಯಯಾಗಿ, ವಿವಿಧ ಪದಾಧಿಕಾರಿಯಾಗಿ, ದಿವ್ಯಾ ಮಹಿಳಾ ಸಂಘದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಭೇಷ್ ಎನಿಸಿಕೊಂಡಿದ್ದಾರೆ. ಓರ್ವ ಮಹಿಳೆ ಐದು ಸಂಘಟನೆಗಳಲ್ಲಿ ಸಕ್ರೀಯರಾಗಿರುವುದು ಗಮನಾರ್ಹ ಅಂಶ. ಅಷ್ಟೇ ಅಲ್ಲ 2013ರಲ್ಲಿ ಬಸ್ರೂರಲ್ಲಿ ನಡೆದ ಕೃಷಿ ಉತ್ಸವದಲ್ಲಿ ತನ್ನ ಹಂದಿಗಳ ಪ್ರದರ್ಶಿಸಿ ಪ್ರಶಂಸಪತ್ರ ಪಡೆದಿದ್ದಾರೆ.ಉತ್ತಮ ಸಂಘಟನಾ ಚತುರೆಯಾಗಿರುವ ಇವರ ನಾಯಕತ್ವದಡಿ ಮಹಿಳೆಯರನ್ನು ಒಗ್ಗೂಡಿಸಿಕೊಂಡು ಬೇರೆ ಬೇರೆ ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಕಾರ್ಮಿನ್ ಲೂಯಿಸ್ ಅವರ ಇನ್ನೊಂದು ವಿಶೇಷ. ಅವರು ಸರ್ವಧರ್ಮ ಸಮನ್ವಯಿ ಮಹಿಳೆ. ಅವರು ಕ್ರೈಸ್ತ ಧರ್ಮದವರಾದರೂ ಕೂಡಾ ಎಲ್ಲಾ ಧರ್ಮದವರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಸಾಮೂಹಿಕ ಸತ್ಯನಾರಾಯಣ ಪೂಜೆ ಇರಲಿ, ಭಜನೆ ಇರಲಿ, ಯಕ್ಷಗಾನ ಕಾರ್ಯಕ್ರಮ ಇರಲಿ, ನಾಗ ಮಂಡಲ ಇರಲಿ ಅಲ್ಲಿ ಸ್ವಯಂ ಸೇವಕರಾಗಿ ಯಾವುದೇ ಪ್ರಚಾರ ಬಯಸದೇ ಕೆಲಸ ಮಾಡುತ್ತಾರೆ. ಪರಿಸರದ ಸುಬ್ರಹ್ಮಣ್ಯ ದೇವಸ್ಥಾನ, ಉಮ್ಮಲ್ತಿ ದೇವಸ್ಥಾನಗಳ ಉತ್ಸವದ ಸಂದರ್ಭದಲ್ಲಿ ಸ್ವಯಂಸೇವಕರಾಗಿ ತಪ್ಪದೆ ಭಾಗವಹಿಸುತ್ತಾರೆ.
ಕಾರ್ಮಿನ್ ಲೂಯಿಸ್ ಮಹಾನ್ ಧೈರ್ಯವಂತೆ. ರಾತ್ರಿ ಎಷ್ಟು ಹೊತ್ತಿಗೆ ಬೇಕಾದರೂ ನಡೆದುಕೊಂಡೆ ಎಲ್ಲಿಗೆ ಬೇಕಾದರೂ ಹೋಗಬಲ್ಲರು. ಹಿಂದೊಮ್ಮೆ ಪರಿಸರದಲ್ಲಿ ಮಾನಸಿಕ ಅಸ್ವಸ್ಥೆಯನ್ನು ಹಿಡಿಯಲು ಇವರೇ ಬೇಕಾಯಿತು. ಅಸಹಾಯಕರು, ಮಾನಸಿಕ ಅಸ್ವಸ್ಥರು ಕಂಡು ಬಂದರೆ ಅವರ ಸೇವೆ ಮಾಡುತ್ತಾರೆ. ಕೆಲವೊಂದು ವಿಶೇಷ ಕೌಶಲ್ಯಗಳು ಇವರಲ್ಲಿ ಇದೆ. ಯಾವುದೇ ಧರ್ಮದವರು ವಿಧಿವಶರಾದರೆ ಮರುಗುವ ಕಾರ್ಮಿನ್ ಅಮ್ಮ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನಡೆಯುವ ಅಲ್ಲಿಯೇ ಇರುತ್ತಾರಂತೆ.
ಅರಾಟೆಯಲ್ಲಿ 40 ವರ್ಷಗಳ ಹಿಂದೆ ಅಂಗನವಾಡಿ ಸಹಾಯಕಿ ಇವರು ಕೆಲಸ ಮಾಡುತ್ತಿದ್ದರು. ಆ ಸಂದರ್ಭ ಒಂದಿಷ್ಟು ಮಹಿಳೆಯರನ್ನು ಒಗ್ಗೂಡಿಸಿ ಅಂಗನವಾಡಿ ಹತ್ತಿರ ಧ್ವಜಾರೋಹಣ ನಡೆಸಿದ್ದು, 15 ವರ್ಷಗಳ ಕಾಲ ಮುಂದುವರಿದಿತ್ತು. ಈಗ ಅಲ್ಲಿ ಸುಸಜ್ಜಿತ ಧ್ವಜಸ್ತಂಭ ನಿರ್ಮಾಣವಾಗಿದೆ. ಆದರೂ ಕೂಡಾ ಕಳೆದ ೪೦ ವರ್ಷಗಳಿಂದ ಆ.೧೫ರಂದು ಧ್ವಜ ಕಟ್ಟಲು ಇವರೇ ಹೋಗುತ್ತಾರೆ.
ಶ್ರಮಜೀವಿಯಾಗಿರುವ ಇವರು ರುಡ್ಸೆಟ್ ಸಂಸ್ಥೆಯಿಂದ ಫಿನೈಲ್ ತಯಾರಿಯ ಬಗ್ಗೆ ತರಬೇತಿ ಪಡೆದು, ಮನೆಯಲ್ಲಿಯೇ ಫಿನೈಲ್ ತಯಾರಿ ಮಾಡಿ ಮಾರಾಟ ಮಾಡುತ್ತಾರೆ. ಜೊತೆಗೆ ಹಂದಿ ಸಾಕಾಣಿಕೆಯನ್ನು ಮಾಡುತ್ತಾರೆ. ಸಮಯವಿದ್ದರೆ ಬೇರೆ ಬೇರೆ ಕಡೆ ಕೆಲಸವನ್ನು ಮಾಡುತ್ತಾರೆ. ಸದಾ ಚಟುವಟಿಕೆಯ ಈ ಮಹಿಳೆಯನ್ನು ಕಂಡರೆ ಇಷ್ಟೆಲ್ಲಾ ವಿಶೇಷತೆ ಇವರಲ್ಲಿ ಅಡಗಿದೆ ಎಂದು ಅನ್ನಿಸುವುದೇ ಇಲ್ಲ.
ಇಳಿ ವಯಸ್ಸಿನಲ್ಲಿ ಆಟೋಟಗಳಲ್ಲಿ ಭಾಗವಹಿಸುತ್ತಾರೆ. ಓಟ, ಲಿಂಬು ಚಮಚ ಓಟ, ಸಂಗೀತ ಖುರ್ಚಿ, ಮಡಿಕೆ ಒಡೆಯುವುದು ಇತ್ಯಾದಿಗಳಲ್ಲಿ ಭಾಗವಹಿಸುತ್ತಾರೆ. ನಾಟಕಗಳಲ್ಲಿಯೂ ಅಭಿನಯಿಸುತ್ತಾರೆ. ಕ್ರೈಸ್ತ ಸಮುದಾಯದ ಸಾಂಪ್ರಾದಾಯಿಕ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. 3 ನೇ ತರಗತಿಯ ತನಕ ಶಿಕ್ಷಣ ಪಡೆದಿರುವ ಇವರು ಕನ್ನಡ, ಕೊಂಕಣಿ, ಹಿಂದಿ, ಮರಾಠಿ, ಗುಜರಾತಿ, ತುಳು ಭಾಷೆಗಳನ್ನು ಕರಗತ ಮಾಡಿಕೊಂಡಿದ್ದಾರೆ.
"ಸಂಪದ ಉಡುಪಿ" ಸಂಸ್ಥೆಯವರು ಕಾರ್ಮಿನ್ ಲೂಯಿಸ್ ಎಲೆಮರೆಯ ಸಾಧನೆ ಗುರುತಿಸಿ ಮಹಿಳಾ ಸಬಲೀಕರಣ, ಸರ್ವಧರ್ಮ ಸಮನ್ವಯತೆಯ ಸೇವೆಗೆ ಸಾಧಕಿ ಪ್ರಶಸ್ತಿ-2019ನ್ನು ನೀಡಿ ಗೌರವಿಸಿದೆ. ಯಾವುದೇ ಪ್ರಚಾರ ಬಯಸದೆ, ಸುಪ್ತವಾಗಿದ್ದುಕೊಂಡೇ ಸೇವೆ ಮಾಡುತ್ತಿರುವ ಮುಗ್ದ ಮಹಿಳೆ ಕಾರ್ಮಿನ್ ಬಾಯಮ್ಮ ಆದರ್ಶರಾಗುತ್ತಾರೆ.