ಕಾಸರಗೋಡು, ಫೆ. 25 (DaijiworldNews/AA): ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಸನ್ಮಾನಿಸಿ ಗೌರವಿಸಿದರು.

ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ'ದಲ್ಲಿ ಈ ಗೌರವ ಸಮರ್ಪಿಸಲಾಯಿತು.
"ಡಾ. ಕೃಷ್ಣಪ್ರಸಾದ್ ಅವರು ಸಮಾಜಕ್ಕೆ ಒಬ್ಬ ಮಾದರಿ ವೈದ್ಯರಾಗಿದ್ದಾರೆ. ಕಳೆದ 25 ವರ್ಷಗಳಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಹೋರಾಡುವುದರ ಜೊತೆಗೆ, ರಾಜ್ಯಾದ್ಯಂತ ಉಚಿತ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ ಮತ್ತು ಕನ್ನಡಕ ವಿತರಣೆಯಂತಹ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಜನಸೇವೆಯೇ ನನ್ನ ಉಸಿರು' ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅವರು ಎಲ್ಲರಿಗೂ ಸ್ಪೂರ್ತಿ" ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಶ್ಲಾಘಿಸಿದರು.
ಔಪಚಾರಿಕ ಕಾರ್ಯಕ್ರಮಕ್ಕೆ ಮುನ್ನ ಶ್ರೀ ಧೂಮಾವತಿ ದೈವಸ್ಥಾನದ ಪರಿಸರದಿಂದ ಸಭಾಂಗಣದವರೆಗೆ ಅತ್ಯಂತ ವಿಜೃಂಭಣೆಯ ಮೆರವಣಿಗೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ಗೋನಾಳದ ರಮೇಶ ಮಹಾಸ್ವಾಮಿಗಳು, ಕನ್ನಡ ಭವನದ ನಿರ್ದೇಶಕ ಡಾ. ಕೆ.ಎನ್. ವೆಂಕಟರಮಣ ಹೊಳ್ಳ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪ್ರಮುಖರಾದ ವಿ.ಜಿ. ಕುಮಾರ್, ಸಾಹಿತಿ ಡಾ. ಸುರೇಶ್ ನೇಗಲಗುಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇನ್ನುಳಿದಂತೆ ಇರಾ ನೇಮು ಪೂಜಾರಿ, ಗದಗ ಜಿಲ್ಲಾ ಕನ್ನಡ ಭವನದ ಅಧ್ಯಕ್ಷ ಡಾ. ತಮ್ಮಣ್ಣ ಗೌಡ ಲಕ್ಷ್ಮೇಶ್ವರ, ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ, ಸಾಹಿತಿಗಳಾದ ಜಯಾನಂದ ಪೆರಾಜೆ, ಡಾ. ಶಾಂತಾ ಪುತ್ತೂರು, ರೇಖಾ ಸುದೇಶ್ ರಾವ್, ಸತ್ಯವತಿ ಭಟ್ ಕೊಳಚಪ್ಪು, ಕೊಡಗು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರುಬೀನಾ ಎಂ.ಎ, ಸಂಘಟಕರಾದ ವಿ.ಎ. ಪ್ರದೀಪ್ ಕುಮಾರ್, ಶಾರದಾ ಮೊಳೆಯಾರ್, ಕನ್ನಡ ಭವನದ ಸ್ಥಾಪಕ ಡಾ. ವಾಮನ ರಾವ್ ಬೇಕಲ್ ಮತ್ತು ವಿರಾಜ್ ಅಡೂರು ಮೊದಲಾದ ಗಣ್ಯರು ಈ ಐತಿಹಾಸಿಕ ಸಮ್ಮೇಳನಕ್ಕೆ ಸಾಕ್ಷಿಯಾದರು.