ಮಂಗಳೂರು, ಆ 3 (Daijiworld News/MSP): ಕೆಫೆ ಕಾಫಿ ಡೇ ಮಾಲೀಕ ಉದ್ಯಮಿ ಸಿದ್ದಾರ್ಥ್ ಅವರು ನೇತ್ರಾವತಿ ನದಿ ನೀರಿನಲ್ಲಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಹೇಳಿದೆ.
ವರದಿಯನ್ನು ನಗರದ ವೆನ್ಲಾಕ್ ಆಸ್ಪತ್ರೆ ಆಸ್ಪತ್ರೆಯ ಅಧೀಕ್ಷರಾದ ಡಾ| ರಾಜೇಶ್ವರಿ ದೇವಿ ಪ್ರಕರಣದ ತನಿಖಾಧಿಕಾರಿಯಾದ ಮಂಗಳೂರು ದ. ಉಪ ವಿಭಾಗದ ಎಸಿಪಿ ಕೋದಂಡರಾಮ ಅವರಿಗೆ ಶುಕ್ರವಾರ ಸಲ್ಲಿಸಿದ್ದಾರೆ.
ನೀರಿನಲ್ಲಿ ಮುಳುಗಿ ಸಿದ್ದಾರ್ಥ್ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದ್ದರೂ ಉಳಿದಂತೆ ಸಾವಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಅಂತಿಮ ವರದಿಯಲ್ಲಿ ಉಲ್ಲೇಖಿಸಲಾಗುವುದು ಎಂದಷ್ಟೇ ತಿಳಿಸಲಾಗಿದೆ. ಮಾತ್ರವಲ್ಲದೆ ಹೆಚ್ಚಿನ ಮಾಹಿತಿ ನೀಡಲು ತನಿಖಾಧಿಕಾರಿ ಕೋದಂಡರಾಮ ಹಾಗೂ ವೈದ್ಯಕೀಯ ಅಧೀಕ್ಷಕಿ ಡಾ ರಾಜೇಶ್ವರಿ ದೇವಿ ನಿರಾಕರಿಸಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ಬಂದಿದ್ದ ಸಿದ್ಧಾರ್ಥ್ ವಿ.ಜಿ. ಅವರು ಜು. 29 ರಂದು ಸಂಜೆ 7 ಗಂಟೆಯ ವೇಳೆಗೆ ಉಳ್ಳಾಲ ಸೇತುವೆ ಬಳಿ ನಾಪತ್ತೆಯಾಗಿದ್ದರು. ಬಳಿಕ ಜು. 31 ರಂದು ಬೆಳಗ್ಗೆ ಅವರ ಮೃತದೇಹ ಸೇತುವೆಯಿಂದ ಸುಮಾರು 4.5 ಕಿ.ಮೀ ದೂರದ ಹೊಯ್ಗೆ ಬಜಾರ್ ಹಿನ್ನೀರಿನಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.
ಸಿದ್ಧಾರ್ಥ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಜು. 31 ರಂದು ನಗರದ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಿ ಬಳಿಕ ಮೃತ ದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು. ಕೆಎಂಸಿ ಆಸ್ಪತ್ರೆಯ ಫೂರೆನ್ಸಿಕ್ ತಜ್ಞ ಡಾ| ಪ್ರತೀಕ್ ರಸ್ತೋಗಿ ಮತ್ತು ವೆನ್ಲಾಕ್ ಆಸ್ಪತ್ರೆಯ ಫೂರೆನ್ಸಿಕ್ ವಿಭಾಗದ ಡಾ| ರಶ್ಮಿ ಅವರು ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದರು.
ಇದು ಪ್ರಾಥಮಿಕ ವರದಿಯಾಗಿದ್ದು ಹೆಚ್ಚಿನ ಪರೀಕ್ಷೆಗಾಗಿ ಮೃತದೇಹದ ಭಾಗಗಳನ್ನು ಹೆಚ್ಚಿನ ಪರೀಕ್ಷೆಗಾಗಿ ದಾವಣೆಗೆರೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ವರದಿ ಬರಲು ಸುಮಾರು 10-15 ದಿನಗಳು ಬೇಕಾಗಬಹುದು. ಆ ಬಳಿಕವೇ ಸಾವಿನ ಸ್ಪಷ್ಟ ಕಾರಣ ತಿಳಿದುಬಂದಿದೆ.