ಮಂಗಳೂರು, ಆ 3 (Daijiworld News/MSP): ಕೆಫೆ ಕಾಫಿ ಡೇ ಮಾಲೀಕರಾಗಿ ಇಡೀ ವಿಶ್ವದಾದ್ಯಂತ ಕಾಫಿಯ ಘಮವನ್ನು ಪಸರಿಸಿದ್ದ ಹಾಗೂ ಕಾಫಿ ಡೇ ಗ್ಲೊಬಲ್ ಲಿಮಿಟೆಡ್ ಘಟಕ, ಆಂಬರ್ ವ್ಯಾಲಿ ಶಾಲೆ, ಸೆರಾಯ್ ಐಷಾರಾಮಿ ಹೋಟೆಲ್ ಸಹಿತ ಹಲವಾರು ಸಂಸ್ಥೆಗಳನ್ನು ಕಟ್ಟಿದ್ದ ವಿ.ಜಿ ಸಿದ್ದಾರ್ಥ್ ಅವರ ಸಾವಿನ ಸುದ್ದಿ ಸಿಡಿಲಂತೆ ಎರಗಿದಾಗ ಅವರಿಗಾಗಿ ಅಸಂಖ್ಯಾತ ಜನ ಸಂಕಟ ಪಟ್ಟು ಕಣ್ಣೀರು ಸುರಿಸಿದವರು, ಸಂತಾಪ ಸೂಚಿಸಿದರು.
ಸಾವಿರಾರು ಜನರ ಪಾಲಿಗೆ ಅನ್ನದಾತರಾಗಿದ್ದ, ಉದ್ಯೋಗಾವಕಾಶಗಳ ಮೂಲಕ ಅನೇಕರ ಜೀವನ ರೂಪಿಸಿದ್ದ, ಕಾಫಿ ಡೇ ಸಾಮ್ರಾಜ್ಯದ ಸಾಮ್ರಾಟ ಎನಿಸಿರುವ ಸಿದ್ಧಾರ್ಥ್ ಅವರು ನೇತ್ರಾವತಿ ನದಿಯಲ್ಲಿ ತಮ್ಮ ಜೀವನ ಕೊನೆಗೊಳಿಸುತ್ತಾರೆ ಎಂದು ಯಾರು ಊಹಿಸಿರಲಿಲ್ಲ.
ಆದರೆ ಅಚ್ಚರಿಯ ಸಂಗತಿ ಎಂದರೆ ನೀರಿನಲ್ಲಿ ಮುಳುಗಿ ಮೃತಪಟ್ಟ ಸಿದ್ದಾರ್ಥ್ ಅವರು ಚೆನ್ನಾಗಿಯೇ ಈಜು ಬಲ್ಲವರಾಗಿದ್ದರು. ತನಿಖಾಧಿಕಾರಿಯವರ ಕೈ ಸೇರಿರುವ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯು ಸಿದ್ದಾರ್ಥ್ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಇದು ಪ್ರಾಥಮಿಕ ವರದಿಯಾಗಿದ್ದರೂ ಈ ವರದಿಯು ಸಿದ್ದಾರ್ಥ್ ಸಾವಿನ ಹಿಂದೆ ಕೊಲೆ ಅಥವಾ ಇನ್ಯಾವುದೋ ಸಂಚನ್ನು ತಳ್ಳಿಹಾಕಿದೆ.
ಹಾಗಿದ್ದರೆ ಈಜು ಬಲ್ಲ ಸಿದ್ದಾರ್ಥ್ ನೀರಿನಲ್ಲಿ ಮುಳುಗಿದ್ದು ಹೇಗೆ ಎಂಬ ಸಂಶಯ ಎಲ್ಲರನ್ನು ಕಾಡತೊಡಗುತ್ತದೆ. ಆದರೆ ಈ ಬಗ್ಗೆ ವಿಧಿ ವಿಜ್ಞಾನ ತಜ್ಞರು ಹೇಳೋದೇ ಬೇರೆ. ಸಿದ್ದಾರ್ಥ್ ಮುಳುಗಲು ಅನೇಕ ಕಾರಣಗಳಿರಬಹುದು..ಸಿದ್ದಾರ್ಥ್ ಸಾಯುವುದಕ್ಕೂ ಮುಂಚೆ ಅವರು ಕಾಲಿನಲ್ಲಿ ಶೂ ಧರಿಸಿದ್ದರು ಹಾಗೂ ಪ್ಯಾಂಟ್ ತೊಟ್ಟಿದ್ದರು. ಈ ಎರಡೂ ಕೂಡಾ ನೀರಿನಲ್ಲಿ ಬಿದ್ದ ತಕ್ಷಣ ಅಧಿಕ ನೀರನ್ನು ಹೀರಿಕೊಂಡು ಭಾರವಾಗುತ್ತದೆ. ಅಲ್ಲದೆ ಇವೆರಡು ನೀರಿನಲ್ಲಿ ಒದ್ದೆಯಾದ ಬಳಿಕ ಸುಲಭವಾಗಿ ಕೈ ಕಾಲು ಆಡಿಸಲು ಹಾಗೂ ದೇಹದ ಚಲನವಲನಕ್ಕೆ ಸಹಕರಿಸುವುದಿಲ್ಲ. ಜೊತೆಗೆ ಈಜುಕೊಳದಲ್ಲಿ ಈಜುವುದಕ್ಕೂ ತುಂಬಿ ಹರಿಯುತ್ತಿರುವ ನದಿಯಲ್ಲಿ ಈಜುವುದಕ್ಕೂ ವ್ಯತ್ಯಾಸಗಳಿರುತ್ತದೆ. ಹೀಗಾಗಿ ನೀರಿನಲ್ಲಿ ಮುಳುಗಿ ಸಿದ್ದಾರ್ಥ್ ಸಾವನ್ನಪ್ಪಿರಬಹುದು ಎನ್ನುತ್ತಾರೆ.