ಪಡುಬಿದ್ರಿ, ಅ 04 (DaijiworldNews/SM): ಇಲ್ಲಿನ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಗ್ರಾಮದ ಕುರಾಲು ಪ್ರದೇಶದಲ್ಲಿ ಜನರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಇದರಿಂದಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ರಾತ್ರಿ ಸಮಯದಲ್ಲಿ ಜನವಸತಿ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಚಿರತೆಯಿಂದಾಗಿ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿತ್ತು. ಈ ಬಗ್ಗೆ ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ನೀಡಿದ ದೂರಿನ ಮೇರೆಗೆ ಕಾಪು ಉಪವಲಯ ಅರಣ್ಯ ಅಧಿಕಾರಿ ನಾಗೇಶ್ ಬಿಲ್ಲವ ಅವರು ಸಿಬ್ಬಂದಿಗಳ ಜೊತೆಗೂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇನ್ನು ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ಬೋನನ್ನು ಇರಿಸಿದ್ದರು. ಚಿರತೆ ಬೋನಿಗೆ ಬಿದ್ದ ಸುದ್ದಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸ್ಥಳಿಯರ ಸಹಕಾರದಿಂದ ಬೋನಿಗೆ ಬಿದ್ದ ಚಿರತೆಯನ್ನು ಉಡುಪಿಗೆ ಸ್ಥಳಾಂತರಿಸಿದ್ದಾರೆ.