ಮಂಗಳೂರು, ಆ.05(Daijiworld News/SS): ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯದ ಕೊರತೆಯಿದೆ ಎಂದು ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ನಗರದ ರಾಜ್ಯ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆದ ಕೆ.ಆರ್. ಶ್ರೀಯಾನ್ ಬರೆದ 'ಕರ್ನಾಟಕ ರೈತ ಚಳವಳಿಗಳು' ಪುಸ್ತಕವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ರಾಜಕೀಯ ವ್ಯವಸ್ಥೆಯಲ್ಲಿ ಅಭಿಪ್ರಾಯ ಬೇಧವಿದ್ದರೂ, ಅದರ ಮೂಲ ಉದ್ದೇಶ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸುವುದು ಆಗಿದೆ. ಅಭಿಪ್ರಾಯ ಬೇಧದ ನಡುವೆ ಶೋಷಣೆ ಮುಕ್ತ ಸಮಾಜ ನಮ್ಮ ಗುರಿ ಎಂದು ತಿಳಿಸಿದರು.
ಬುದ್ಧಿವಂತರ ಜಿಲ್ಲೆ ಎಂದು ನಮ್ಮನ್ನು ಕರೆಯುತ್ತಾರೆ. ಆದರೆ ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯದ ಕೊರತೆಯಿದೆ. ಸೌಹಾರ್ದ ಸಮಾಜ ನಮಗೆ ಅಗತ್ಯವಿದೆ ಎಂದು ನುಡಿದರು.
ರೈತ ಚಳವಳಿಯಿಂದ ಸಾಮಾಜಿಕ ನ್ಯಾಯ ವಂಚಿತರಿಗೆ ತುಂಬಾ ಪ್ರಯೋಜನವಾಗಿದೆ. ಇದರಿಂದ ಶೋಷಿತ ಸಮಾಜದ ಹೆಚ್ಚಿನವರಿಗೆ ಸ್ವಂತ ಕಾಲಿನ ಮೇಲೆ ನಿಲ್ಲುವ ಅವಕಾಶ ದೊರೆತಿದೆ. ಈ ಋುಣವನ್ನು ಶೋಷಿತ ಸಮಾಜ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ರೈತ ಚಳವಳಿಯ ಮಾಹಿತಿ ಮುಂದಿನ ಪೀಳಿಗೆಗೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೆ. ಆರ್. ಶ್ರೀಯಾನ್ ಅವರ ಪ್ರಯತ್ನ ಶ್ಲಾಘನೀಯ. ಹಿಂದೆ ಯಾವ ರೀತಿಯಲ್ಲಿ ಅಸಮಾನತೆ ಇತ್ತು?, ಜಮೀನ್ದಾರಿ ವ್ಯವಸ್ಥೆ ಹೇಗಿತ್ತು?, ರೈತ ಚಳವಳಿ ಹೇಗೆ ನಡೆಯಿತು? ಎನ್ನುವ ಬಗ್ಗೆ ಯುವ ಪೀಳಿಗೆಗೆ ಮಾಹಿತಿ ಸಿಗಬೇಕು. ಸೈದ್ಧಾಂತಿಕವಾಗಿ ಎಡಪಂಥೀಯ ಚಳವಳಿಯ ವಿಚಾರದಲ್ಲಿ ನನಗೆ ತುಂಬಾ ಸಂತೋಷವಿದೆ ಎಂದು ತಿಳಿಸಿದರು.