ಬಂಟ್ವಾಳ, ಆ.05(Daijiworld News/SS): ನಾಗಾರಾಧನೆಗಾಗಿ ದಳವಾಯಿ ಮನೆತನಕ್ಕೆ ತಮ್ಮ ಸ್ವಂತ ಜಮೀನನ್ನು ದಾನವಾಗಿ ನೀಡುವ ಮೂಲಕ ಮಾಜಿ ಸಚಿವ ಮತ್ತು ಶಾಸಕ ಯು.ಟಿ.ಖಾದರ್ ಸೌಹಾರ್ದತೆ, ಸಾಮರಸ್ಯ ಮೆರೆದಿದ್ದಾರೆ.
ಬಂಟ್ವಾಳ ತಾಲೂಕಿನ ಪರಿಯಾಲ್ತಡ್ಕದಲ್ಲಿ ಶಾಸಕ ಯು.ಟಿ.ಖಾದರ್ ಅವರಿಗೆ ಸೇರಿದ ಜಮೀನಿತ್ತು. ಈ ಜಮೀನಿನಲ್ಲಿ ದಳವಾಯಿ ಮನೆತನಕ್ಕೆ ಸೇರಿದ ನಾಗಬನವಿತ್ತು. ಈ ಹಿನ್ನಲೆ ದಳವಾಯಿ ಕುಟುಂಬದ ಸದಸ್ಯರು ಜಾಗವನ್ನು ಬಿಟ್ಟು ಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದ್ದರು. ಆ ಜಾಗವನ್ನು ಹಣಕೊಟ್ಟು ಖರೀದಿ ಮಾಡುತ್ತೇವೆ ಎಂದು ಖಾದರ್ ಬಳಿ ಕೋರಿಕೊಂಡಿದ್ದರು. ಆದರೆ, ನಾಗಾರಾಧನೆಗೆ ಅಡ್ಡಿಯಾಗಬಾರದೆಂಬ ಹಿನ್ನೆಲೆಯಲ್ಲಿ, ಉದಾರ ಮನಸ್ಸಿನ ಯು.ಟಿ ಖಾದರ್ ತಮ್ಮ ಸ್ವಂತ ಜಮೀನನ್ನು ಯಾವುದೇ ಬೇಡಿಕೆ ಇಡದೆ ದಾನ ಮಾಡಿದ್ದಾರೆ.
ಈ ಜಾಗಕ್ಕೆ ಹಣ ನೀಡಬೇಡಿ. ನಿಮ್ಮ ಆಚರಣೆಗೆ ಧಕ್ಕೆ ಬೇಡ. ಜಾಗವನ್ನು ನಾನು ಉಚಿತವಾಗಿ ನೀಡುತ್ತೇನೆ ಎಂದ ಶಾಸಕರು, ತಮ್ಮ 20 ಸೆಂಟ್ಸ್ ಜಾಗವನ್ನ ಉಚಿತವಾಗಿ ನೀಡುವ ಮೂಲಕ ಸಾಮರಸ್ಯ ಮೆರೆದಿದ್ದಾರೆ. ಉಚಿತವಾಗಿ ಬಿಟ್ಟುಕೊಟ್ಟ ಜಮೀನಲ್ಲಿ ಉತ್ತಮ ನೀರಿರುವ ಬಾವಿ ಕೂಡಾ ಇದ್ದು, ಅದನ್ನೂ ದಾನ ಮಾಡಿದ್ದಾರೆ.
ಆಚಾರ-ವಿಚಾರ, ಧರ್ಮ, ಸಂಸ್ಕೃತಿಯನ್ನ ಗೌರವಿಸುವ ನಿಟ್ಟಿನಲ್ಲಿ ಜಾಗ ಬಿಟ್ಟುಕೊಟ್ಟಿದ್ದೇನೆ. ನಮ್ಮ ಹೆತ್ತವರು ಸಣ್ಣದರಲ್ಲೇ ಒಂದು ಸಂಸ್ಕೃತಿ, ಆಚಾರ ವಿಚಾರವನ್ನು ಕಲಿಸಿಕೊಟ್ಟಿದ್ದಾರೆ. ನಮ್ಮ ಧರ್ಮವನ್ನು ಪಾಲಿಸುವ ಜೊತೆಗೆ ಇತರ ಧರ್ಮಗಳನ್ನು ಗೌರವಿಸುವ ನಿಟ್ಟಿನಲ್ಲಿ ನಾವು ಆ ಸ್ಥಳವನ್ನು ಬಿಟ್ಟುಕೊಟ್ಟಿದ್ದೇವೆ ಎಂದು ಖಾದರ್ ಹೇಳಿದ್ದಾರೆ.
ಇದೀಗ ಶಾಸಕರ ಉದಾರತನವನ್ನು ದಳವಾಯಿ ಕುಟುಂಬ ಮತ್ತು ವಿಟ್ಲ ಗ್ರಾಮಸ್ಥರು ಮೆಚ್ಚಿದ್ದಾರೆ. ಮಾತ್ರವಲ್ಲ, ಮುಸ್ಲಿಂ ಶಾಸಕನೋರ್ವ ಹಿಂದೂ ಧಾರ್ಮಿಕತೆಗೆ ಕೈಜೋಡಿಸಿದ್ದಕ್ಕೆ ಜಿಲ್ಲೆಯಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.