ಬಂಟ್ವಾಳ, ಆ.05(Daijiworld News/SS): ಇಲ್ಲಿನ ಟೀಮ್ ವೀರಾಂಜನೇಯ ಫರಂಗಿಪೇಟೆ ತಂಡದ ಆಶ್ರಯದಲ್ಲಿ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ಹತ್ತಿರ ತುಪ್ಪೆಕಲ್ಲು ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ "ವೃಕ್ಷಾರೋಪಣ -ವೃಕ್ಷ ವೃದ್ಧಿಯಿಂದ ಮನುಕುಲಕ್ಕೆ ಸಮೃದ್ಧಿ" ಎಂಬ ಶೀರ್ಷಿಕೆಯೊಂದಿಗೆ ಸಹಸ್ರಾರು ನಾಗರಿಕರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಅರ್ಕುಳ ಬೀಡು ಧರ್ಮದರ್ಶಿಗಳಾದಂತಹ ಶ್ರೀ ವಜ್ರನಾಭ ಶೆಟ್ಟಿ ಅವರು, ಬಿಲ್ವ ಪತ್ರ ಗಿಡವನ್ನು ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಏರುತ್ತಿರುವ ತಾಪಮಾನ, ಮಳೆಯ ಕಣ್ಣು ಮುಚ್ಚಾಲೆಯಾಟ, ವಿಷಯುಕ್ತ ಗಾಳಿ ಎಲ್ಲವೂ ಮಾನವ ನಿರ್ಮಿತ ಸಮಸ್ಯೆಗಳಾಗಿವೆ. ಈ ನಿಟ್ಟಿನಲ್ಲಿ ಗಿಡಗಳನ್ನು ನೆಡುವುದು ಮತ್ತು ಆಸಕ್ತರಿಗೆ ಗಿಡ ವಿತರಣೆ ಅಭಿನಂದನೀಯ ಕಾರ್ಯಕ್ರಮ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಅರ್ಕುಳ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ರತ್ನರಾಜ್ ಶೆಟ್ಟಿ, ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ|| ಜಯಕುಮಾರ್ ಶೆಟ್ಟಿ SDMC ಉಜಿರೆ, ಕಂಪ ಸದಾನಂದ ಆಳ್ವಾ, ಪರಿಸರ ಪ್ರೇಮಿ ಮಾಧವ ಉಲ್ಲಾಲ್, ಕೃಷಿಕ ಅಜಿತ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ತುಪ್ಪೆಕಲ್ಲು, ಸೇಸಪ್ಪ ಕರ್ಕೇರ ಧರ್ಮಗಿರಿ, ದಿನಕರ ಕರ್ಕೇರ ಮಂಟಮೆ, ಕೃಷಿಕ ಉಮೇಶ್ ಸೇಮಿತ ಸೇರಿದಂತೆ ಅರ್ಕುಳ ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಸ್ವಸಹಾಯ ಗುಂಪುಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.