ಉಡುಪಿ, ಮಾ. 21 (DaijiworldNews/TA): ಮಧ್ಯಪ್ರಾಚ್ಯ ಕದನ ಪರಿಣಾಮ ಕರಾವಳಿ ಭಾಗದ ಮೀನುಗಾರರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಏಷ್ಯಾದ ಅತಿ ದೊಡ್ಡ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಮಲ್ಪೆಯಲ್ಲಿ ಮೀನುಗಾರಿಕೆ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಹೋಟೆಲ್ಗಳ ಮುಚ್ಚುಗಡೆ ಹಾಗೂ ಮೀನು ರಫ್ತು ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಮೀನಿನ ದರಗಳು ಭಾರೀ ಪ್ರಮಾಣದಲ್ಲಿ ಕುಸಿದಿವೆ. ಮಾರುಕಟ್ಟೆಯಲ್ಲಿ ಪ್ರತಿ ಮೀನಿನ ದರದಲ್ಲಿ ಸುಮಾರು ರೂ. 100ರಿಂದ ರೂ. 200ರವರೆಗೆ ಇಳಿಕೆಯಾಗಿದೆ. ಇದರಿಂದ ಮೀನುಗಾರ ಮಹಿಳೆಯರಿಗೆ ಅಸಲು ಹಣವೂ ಸಿಗದಂತಾಗಿ, ವ್ಯಾಪಾರದಲ್ಲಿ ದೊಡ್ಡ ಮಟ್ಟದ ನಷ್ಟ ಅನುಭವಿಸುತ್ತಿದ್ದಾರೆ.
ಅಡುಗೆ ಅನಿಲ (LPG) ಪೂರೈಕೆಯಲ್ಲಿ ಉಂಟಾದ ವ್ಯತ್ಯಯ ಹಾಗೂ ಯುದ್ಧದ ಪರಿಣಾಮವಾಗಿ ಅನೇಕ ಮೀನು ಊಟದ ಹೋಟೆಲ್ಗಳು ಬಂದ್ ಆಗುತ್ತಿವೆ. ಹೋಟೆಲ್ ಮಾಲೀಕರು ಮಾರುಕಟ್ಟೆಗೆ ಬಾರದ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಹಿವಾಟು ಸ್ಥಗಿತಗೊಂಡಿದೆ.
ಮೀನಿನ ದರದಲ್ಲಿ ಇಳಿಕೆ (ಹಳೆ ದರ vs ಹೊಸ ದರ):
ಮಾಂಜಿ (ಪಾಂಫ್ರೆಟ್): ರೂ. 1550 → ರೂ.1400 (ರೂ.150 ಇಳಿಕೆ)
ಅಂಜಲ್ (ಸೀ ಫಿಶ್): ರೂ.1100 → ರೂ.1000 (ರೂ.100 ಇಳಿಕೆ)
ದೊಡ್ಡ ಬಂಗುಡೆ: ರೂ.300 → ರೂ.260 (ರೂ.40 ಇಳಿಕೆ)
ಡಿಸ್ಕೋ ಮೀನು: ರೂ.180 → ರೂ.140 (ರೂ.40 ಇಳಿಕೆ)
ರಾಣಿ ಮೀನು: ರೂ.280 → ರೂ.245 (ರೂ.35 ಇಳಿಕೆ)
ಚಿಕ್ಕ ಬಂಗುಡೆ: ರೂ.210 → ರೂ.180 (ರೂ.30 ಇಳಿಕೆ)
ಸಿಗಡಿ (ಪ್ರಾನ್ಸ್): ರೂ.340 → ರೂ.320 (ರೂ.20 ಇಳಿಕೆ)
ಮಲ್ಪೆಯಿಂದ ಕೇರಳದ ಹೋಟೆಲ್ಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಮೀನು ರಫ್ತಾಗುತ್ತಿತ್ತು. ಆದರೆ ಇದೀಗ ಕೇರಳದಲ್ಲಿಯೂ ಹೋಟೆಲ್ಗಳು ಬಂದ್ ಆಗಿರುವುದರಿಂದ ಮೀನು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಯುದ್ಧದ ಹಿನ್ನೆಲೆ ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾದ ಅಡಚಣೆ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ನೀಡಿದ್ದು, ಅದರ ಪರೋಕ್ಷ ಪರಿಣಾಮ ಮೀನುಗಾರಿಕಾ ಮಾರುಕಟ್ಟೆಯ ಮೇಲೆ ಕಾಣಿಸಿಕೊಂಡಿದೆ. “ಯುದ್ಧ ಮುಗಿದರೆ ಸಾಕು, ನಮ್ಮ ಬದುಕು ಮತ್ತೆ ಹಳೆಯಂತಾಗಲಿ” ಎಂದು ಮೀನುಗಾರರು ಆಶಾಭಾವದಿಂದ ಕಾಯುತ್ತಿದ್ದಾರೆ.