ಬೆಳ್ತಂಗಡಿ, ಆ.05(Daijiworld News/SS): ನಾಗರ ಪಂಚಮಿ ಪ್ರಯುಕ್ತ ದ.ಕ ಜಿಲ್ಲಾ ಸಹಕಾರಿ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಘ (ನಿ) ಹಾಗೂ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ (ನಿ) ಇದರ ಜಂಟಿ ನೇತೃತ್ವದಲ್ಲಿ ಕಲ್ಲಿಗೆ ಹಾಲರೆಯುವ ಮೂಢನಂಬಿಕೆಯನ್ನು ವಿರೋಧಿಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಹಾಲು ವಿತರಣಾ ಕಾರ್ಯಕ್ರಮ ನಡೆಯಿತು.
ನಂಬಿಕೆ ಹೆಸರಿನಲ್ಲಿ ಹಾಲು ಕುಡಿಯದ ಹಾವಿನ ಹೆಸರಿನಲ್ಲಿ ಮೂಢನಂಬಿಕೆಯ ಭಾಗವಾಗಿ ಲಕ್ಷಾಂತರ ಲೀಟರ್ ಹಾಲನ್ನು ಕಲ್ಲಿಗೆ ಸುರಿಯುವ ಬದಲಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ರೋಗಿಗಳಿಗೆ, ಮಕ್ಕಳು, ಮಹಿಳೆಯರಿಗೆ ನೀಡುವುದು ಉತ್ತಮ. ಇದು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಹಕಾರಿ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಾಪಕಿ ಆಶಾ ಸುಜೀತ್ ಹೇಳಿದರು.
ಹಾವು ಎಂದಿಗೂ ಹಾಲು ಕುಡಿಯುವುದಿಲ್ಲ. ಇಲಿ, ಹುಳ, ಗೆದ್ದಲು ಹಾವಿನ ಆಹಾರ. ಆದರೆ ನಾಗರಿಕ ಸಮಾಜ ನಂಬಿಕೆಯ ಹೆಸರಿನಲ್ಲಿ ನಾಗರ ಪಂಚಮಿ ಹೆಸರಿನಲ್ಲಿ ಲಕ್ಷಾಂತರ ಲೀಟರ್ ಹಾಲನ್ನು ಕಲ್ಲಿಗೆ ಸುರಿದು ಪೋಲು ಮಾಡಲಾಗುತ್ತಿದೆ. ಅದೆಷ್ಟೋ ಮಕ್ಕಳು ಹಾಲು ಸಿಗದೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳಿಗೆ ಹಾಲು ವಿತರಿಸುವ ಕಾರ್ಯ ಶ್ಲಾಘನೀಯವಾದುದು. ಇದು ಇತರರಿಗೆ ಮಾದರಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿದ್ಯಾವತಿ, ಡಾ. ಆದಂ, ಡಾ.ಚಂದ್ರಕಾಂತ್, ಸಂಗಾತಿ ಎಕೆಜಿ ಬೀ.ಕಾ.ಗೃ.ನಿ.ಸಹಕಾರಿ ಸಂಘ (ನಿ) ಅಧ್ಯಕ್ಷ ಹರಿದಾಸ್ ಎಸ್. ಎಂ, ಜಿಲ್ಲಾ ಸಹಕಾರಿ ಆಸ್ಪತ್ರೆ , ವೈದ್ಯಕೀಯ ಶಿಕ್ಷಣ ಹಾಗೂ ಸಂಶೋದನಾ ಸಂಘ (ನಿ) ಇದರ ನಿರ್ದೇಶಕರಾದ ಶಿವಕುಮಾರ್ ಎಸ್.ಎಂ, ಸುಕನ್ಯಾ ಹೆಚ್, ಸದಸ್ಯರಾದ ಸುಜೀತ್ ಅತ್ತಾಜೆ, ಪದ್ಮಾವತಿ, ಕುಸುಮಾ, ಕೃಷ್ಣಪ್ಪ, ಚೇತನ್, ಸುಧಾ.ಕೆ ರಾವ್ ಮೊದಲಾದವರು ಉಪಸ್ಥಿತರಿದ್ದರು.