ಬಂಟ್ವಾಳ, ಮಾ. 21 (DaijiworldNews/TA): ದ.ಕ.ಜಿಲ್ಲೆಯಲ್ಲಿ ಸಾಂಪ್ರದಾಯಿಕ ಜೂಜು ರಹಿತ ಕೋಳಿ ಅಂಕಗಳಿಗೆ ಅವಕಾಶ ನೀಡುವಂತೆ ಜಿಲ್ಲೆಯ ಶಾಸಕರ ಜೊತೆ ಬೆಂಗಳೂರು ವಿಧಾನ ಸೌಧಕ್ಕೆ ತೆರಳಿ ರಾಜ್ಯ ಸರಕಾರಕ್ಕೆ ಒತ್ತಡವನ್ನು ಹಾಕಿದ್ದೇವೆ ಎಂದು ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ಶಿವಣ್ಣ ಗೌಡ ಕಡಬ ತಿಳಿಸಿದ್ದಾರೆ.

ಅವರು ಬಿ.ಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಂಪ್ರದಾಯಿಕ ಕೋಳಿ ಅಂಕಗಳನ್ನು ನಡೆಸಲು ಅವಕಾಶ ನೀಡುವ ಸಲುವಾಗಿ ಜಿಲ್ಲೆಯ ರೈತರು ಸೇರಿಕೊಂಡು ಜಿಲ್ಲಾ ಮಟ್ಟದ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆಯನ್ನು ಮಾಡಿದ್ದೇವೆ,ಇದೀಗ ಪ್ರತಿ ತಾಲೂಕಿನಲ್ಲಿ ಇದರ ಸಮಿತಿಗಳನ್ನು ರಚಿಸಿಕೊಂಡು ಅ ಮೂಲಕ ಜಿಲ್ಲೆಯ ಧಾರ್ಮಿಕ ಆಚರಣೆಗಳ ಉಳಿವಿಗಾಗಿ ಹೋರಾಟ ಮಾಡಲು ಇನ್ನಷ್ಟು ಶಕ್ತಿಯನ್ನು ತುಂಬಲು ಮುಂದಾಗಿದ್ದೇವೆ.
ಅ ನಿಟ್ಟಿನಲ್ಲಿ ಮಾ.24 ರಂದು ಮಂಗಳವಾರ ಬಂಟ್ವಾಳ ತಾಲೂಕಿನ ವಗ್ಗ ಕಾವಳಪಡೂರು ಸಮೃದ್ದಿ ಸಹಕಾರ ಸೌಧ ಸಭಾಂಗಣದಲ್ಲಿ ಸಮಿತಿಯ ಸಭೆಯನ್ನು ಕರೆಯಲಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬೆಳ್ಳಿಯಪ್ಪ ಗೌಡ ಕಡಬ, ಆನಂದ ಪೂಜಾರಿ, ಗಂಗಾದರ ಪೂಜಾರಿ ಮತ್ತು ಹರಿದಾಸ ಕಾವಳಕಟ್ಟೆ ಉಪಸ್ಥಿತರಿದ್ದರು.