ಮಂಗಳೂರು, ಆ.05(Daijiworld News/SS): ಆರ್ಟಿಕಲ್ 370 ರದ್ದಾಗಿರುವ ಈ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರದ ಎಲ್ಲಾ ಮಂತ್ರಿಮಂಡಲ ಮತ್ತು ದೇಶದ ನಾಗರಿಕರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಇಂದು ನನಗೆ ಡಾಕ್ಟರ್ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನೆನಪು ಮರುಕಳಿಸುತ್ತಿದೆ. ಅವರ ಬಗ್ಗೆ ಹೆಮ್ಮೆ ಹಾಗೂ ಗೌರವ ಉಕ್ಕಿ ಹರಿಯುತ್ತಿದೆ. ಇದು ಲೋಕಸಭೆಯಲ್ಲಿ ಅವರಿಗೆ ನೀಡಿದ ಶ್ರದ್ಧಾಂಜಲಿ ಎಂದು ಭಾವಿಸುತ್ತೇನೆ. ಇದರಿಂದ ಉಂಟಾದ ಭಿನ್ನಾಭಿಪ್ರಾಯದಿಂದಲೇ ಅವರು ನೆಹರು ಅವರ ಮಂತ್ರಿಮಂಡಲವನ್ನು ತ್ಯಜಿಸಿ 1951 ರಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಈ ದೇಶದಲ್ಲಿ ದೋ ಪ್ರಧಾನ್, ದೋ ನಿಶಾನ್, ದೋ ವಿಧಾನ್ ನಹಿ ಚಲೆಗಾ ಎಂಬ ರಣಮಂತ್ರವನ್ನು ಅವರು ಅಂದೇ ಘೋಷಿಸಿದ್ದರು ಎಂದು ಹೇಳಿದರು.
ಕೇಂದ್ರ ತೆಗೆದುಕೊಂಡಿರುವ ಈ ನಿರ್ಧಾರದಿಂದ ಭಾರತೀಯ ಜನತಾ ಪಾರ್ಟಿ ಹಾಗೂ ಭಾರತೀಯ ಜನಸಂಘದ ಕಾರ್ಯಕರ್ತರ ಸಂತಸ ನೂರ್ಮಡಿಯಾಗಿದೆ. ಇದು ಮರೆಯಲಾಗದ ಕ್ಷಣ ಹಾಗೂ ದಿನ. ಪ್ರತ್ಯಕ್ಷವಾಗಿ ಹಾಗೂ ವೈಯಕ್ತಿಕವಾಗಿ ನಾನು ತುಂಬಾ ಭಾವುಕನಾದ ದಿನ ಇದು ಎಂದು ಹೇಳಿದರು.
ನಾನು ಈ ಸಂದರ್ಭದಲ್ಲಿ ನಮ್ಮ ಸಂಘಟನೆಯ ಎಲ್ಲಾ ಹಿರಿಯರನ್ನು ನೆನೆಯುತ್ತೇನೆ. ಅವರ ತ್ಯಾಗ, ಅವರ ಪರಿಶ್ರಮ, ಅವರ ಬಲಿದಾನ ಮರೆಯುವಂಥಹದ್ದಲ್ಲ. ಆದರೆ ಈ ದೇಶದ ನೆಲ, ಜಲ, ಗಾಳಿ ಅನುಭವಿಸಿ ಭಾರತವನ್ನು ವಿರೋಧಿಸುವಂತಹ ಕೆಲಸವನ್ನು ರಾಜಕೀಯ ಪಕ್ಷದವರು ಮಾಡುತ್ತಿರುವುದು ಅಘಾತಕಾರಿ ಸಂಗತಿ. ಮಾತ್ರವಲ್ಲ ಇದೇ ಮಣ್ಣಿನಲ್ಲಿ ಹುಟ್ಟಿದ ಕೆಲ ಜನರು, ರಾಜಕಾರಣಿಗಳು ದೇಶದ್ರೋಹದ ಮಾತುಗಳನ್ನಾಡುತ್ತಿರುವುದು ದುಃಖಕರ. ಇದು ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಭಾವನೆಗಳ ಕಟ್ಟೆಯೊಡೆಯುವ ಅನುಭವ ಎಂದು ಶಾಸಕ ಕಾಮತ್ ತಿಳಿಸಿದರು.