ಕಾರ್ಕಳ, ಮಾ. 29 (DaijiworldNews/TA): ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ಎಂಬಲ್ಲಿ ಕಳೆದ ವರ್ಷ ನಡೆದ ಜಾನುವಾರು ಕಳವು ಪ್ರಕರಣದಲ್ಲಿ ಪೊಲೀಸರ ತನಿಖೆ ಮುಂದುವರಿದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಜಯಶ್ರೀ ಪೂಜಾರಿ ಅವರ ಮನೆಯ ಹಟ್ಟಿಗೆ ನುಗ್ಗಿದ ಆರೋಪಿಗಳು, ಜಾನುವಾರುಗಳನ್ನು ಕಳವು ಮಾಡಲು ಯತ್ನಿಸಿ ತಲವಾರು ತೋರಿಸಿ ಬೆದರಿಕೆ ಹಾಕಿದ್ದರು. ಬಳಿಕ ಹಟ್ಟಿಯಲ್ಲಿದ್ದ ಮೂರು ಜಾನುವಾರುಗಳ ಹಗ್ಗಗಳನ್ನು ಕತ್ತರಿಸಿ, ಅವುಗಳನ್ನು ವಾಹನದಲ್ಲಿ ತುಂಬಿಕೊಂಡು ಕಳವು ಮಾಡಿಕೊಂಡು ಹೋಗಿ ವಧೆ ಮಾಡಿರುವುದು ಬೆಳಕಿಗೆ ಬಂದಿದೆ. ಕಳವಾದ ಜಾನುವಾರುಗಳ ಮೌಲ್ಯವು ಸುಮಾರು 35,000 ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಕಾರ್ಕಳ ಸಿಪಿಐ ಅವರ ನೇತೃತ್ವದಲ್ಲಿ ಮೊಹಮ್ಮದ್ ಯೂನಿಸ್ (31), ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಕು (29), ಮತ್ತು ನಾಸಿರ್ ಅಲಿಯಾಸ್ ಮೊಹಮ್ಮದ್ ನಾಸಿರ್ (28) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನಂತರ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಮುಂದಿನ ತನಿಖೆಯಲ್ಲಿ ಆರೋಪಿಗಳು ಸಂಘಟಿತವಾಗಿ ಕೃತ್ಯ ಎಸಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಅವರ ವಿರುದ್ಧ ಕೋಕಾ ಕಾಯಿದೆಯನ್ನು ಅನ್ವಯಿಸಲಾಗಿದೆ. ಇದರಿಂದಾಗಿ ಈಗಾಗಲೇ ಜಾಮೀನಿನ ಮೇಲೆ ಹೊರಗಿದ್ದ ಆರೋಪಿಗಳ ಜಾಮೀನು ರದ್ದುಪಡಿಸಿ, ಮೊಹಮ್ಮದ್ ಯೂನಿಸ್, ನಾಸಿರ್ ಹಾಗೂ ನಾಲ್ಕನೇ ಆರೋಪಿ ಶೌಕತ್ ಆಲಿ (36) ಅವರನ್ನು ಮರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಸ್ತುತ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.