ಉಡುಪಿ, ಮಾ. 29 (DaijiworldNews/TA): ಯೇಸು ಕ್ರಿಸ್ತರು ಜೆರುಸಲೇಂ ನಗರ ಪ್ರವೇಶಿಸಿದ ಸಂಕೇತವಾಗಿ ‘ಗರಿಗಳ ಭಾನುವಾರ ಹಬ್ಬ’ ಎಂದೇ ಪ್ರಸಿದ್ಧಿ ಪಡೆದಿರುವ ‘ಪಾಮ್ ಸಂಡೆ’ಯನ್ನು ಜಿಲ್ಲಾದ್ಯಂತ ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಕಲ್ಯಾಣಪುರ ಮಿಲಾಗ್ರಿಸ್ ಪ್ರಧಾನ ದೇವಾಲಯದಲ್ಲಿ ನಡೆದ ಪಾಮ್ ಸಂಡೆ ಧಾರ್ಮಿಕ ವಿಧಿವಿಧಾನದಲ್ಲಿ ಭಾಗವಹಿಸಿ ಸಂದೇಶ ನೀಡಿದರು. ಚರ್ಚಿನ ಪ್ರಧಾನ ಧರ್ಮಗುರು ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ|ಪ್ರದೀಪ್ ಕಾರ್ಡೊಜಾ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಕ್ರೈಸ್ತರು ಬೆಳಗ್ಗಿನ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡು ತೆಂಗಿನ ಗರಿಗಳನ್ನು ಹಿಡಿದು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗುವ ಮೂಲಕ ಯೇಸುವಿನ ಸ್ಮರಣೆ ಮಾಡಿದರು.
ಚರ್ಚುಗಳಲ್ಲಿ ಯೇಸುವಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಬಲಿಪೂಜೆಯನ್ನು ನೆರವೇರಿಸಲಾಯಿತು. ಉಡುಪಿ ಶೋಕಮಾತಾ ದೇವಾಲಯದಲ್ಲಿ ವಂ|ಚಾರ್ಲ್ಸ್ ಮಿನೇಜಸ್, ಶಿರ್ವ ಆರೋಗ್ಯ ಮಾತಾ ಚರ್ಚಿನಲ್ಲಿ ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಉಡುಪಿ ಧರ್ಮಪ್ರಾಂತ್ಯದ ನಿಯೋಜಿತ ಧರ್ಮಾಧ್ಯಕ್ಷರಾದ ಶ್ರೇಷ್ಠಗುರು ವಂ|ಡಾ|ಲೆಸ್ಲಿ ಸಿ. ಡಿ’ಸೋಜಾ, ತೊಟ್ಟಂ ಸಂತ ಅನ್ನಮ್ಮ ದೇವಾಲಯಲ್ಲಿ ಧರ್ಮಗುರು ಡೆನಿಸ್ ಡೆಸಾ, ಸಾಸ್ತಾನ ಚರ್ಚ್ ನಲ್ಲಿ ವಂ|ಸುನೀಲ್ ಡಿಸಿಲ್ವಾ, ಉಪಸ್ಥಿತಿಯಲ್ಲಿ ಪಾಮ್ ಸಂಡೆಯ ಧಾರ್ಮಿಕ ವಿಧಿಗಳು ಜರುಗಿದವು. ಜಿಲ್ಲೆಯ ಎಲ್ಲ ಚರ್ಚ್ ಗಳಲ್ಲಿ ಶ್ರದ್ಧಾಭಕ್ತಿಯಿಂದ ಆಯಾ ಚರ್ಚಿನ ಧರ್ಮಗುರುಗಳ ನೇತೃತ್ವದಲ್ಲಿ ಪಾಮ್ ಸಂಡೆ ಜರುಗಿತು.